ಹೊಸದಿಲ್ಲಿ: ಕೊರೋನಾ ಮಹಾಮಾರಿಯಿಂದ ಬೇರೆ ಬೇರೆ ರಾಜ್ಯಗಳಲ್ಲಿರುವರು ಸ್ವಂತ ಊರುಗಳಿಗೆ ತೆರಳಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.
ದೇಶದ ಮಹಾನಗರಳಾದ ದಿಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಅನೇಕ ಕಡೆ ವಿವಿಧ ರಾಜ್ಯಗಳ ಜನತೆ ವಾಸವಾಗಿದ್ದು ಅವರೆಲ್ಲರೂ ತಮ್ಮ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗಿಲ್ಲ. ಲಾಕ್ ಡೌನ್ ಕಾರಣದಿಂದ ಅಂತಾರಾಜ್ಯಗಳ ನಡುವೆ ರೈಲು ಮತ್ತು ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಕಳೆದ ಒಂದು ತಿಂಗಳಿಂದ ಬಹಳಷ್ಟು ಮಂದಿ ತಾವಿದ್ದ ಕಡೆಯೇ ಪರಿತಪಿಸುವಂತಾಗಿದೆ. ಅಲ್ಲದೆ ಪಟ್ಟಣ ಮತ್ತು ನಗರಗಳಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ಕೂಲಿ ಕಾರ್ಮಿಕರ ಸಂಖ್ಯೆಯೇ ಅಧಿಕವಾಗಿದ್ದು, ಇವರನ್ನು ಸುರಕ್ಷಿತವಾಗಿ ಸಾಗಿಸಲು ಆಯಾ ರಾಜ್ಯಗಳೂ ಹೊಣೆಗಾರಿಕೆ ವಹಿಸಬೇಕಿದೆ. ಬಸ್ ಮೂಲಕ ಪ್ರಯಾಣಿಕರು ಅವರವರ ಊರುಗಳಿಗೆ ತೆರಳುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಅಲ್ಲದೆ ಬಸ್ನಲ್ಲಿ ಸ್ಯಾನಿಟೈಸರ್ಗಳನ್ನು ಸರಿಯಾಗಿ ಬಳಸಿರಬೇಕು. ತಮ್ಮ ಸ್ವಂತ ಊರುಗಳಿಗೆ ತಲುಪಿದ ಮೇಲೆ ಮತ್ತೆ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ.