Friday, August 19, 2022

Latest Posts

ಕೇರಳಕ್ಕೆ ಮುಂಗಾರು ಪ್ರವೇಶ: ಈ ಬಾರಿ ಸರಿಯಾದ ದಿನಕ್ಕೇ ಕೇರಳಕ್ಕೆ ಕಾಲಿಟ್ಟ ವರುಣ

ತಿರುವನಂತಪುರ: ಮುಂಗಾರು ಮಾರುತವು ಕೇರಳವನ್ನು ಪ್ರವೇಶಿಸಿದೆಯೆಂದು ಭಾರತೀಯ ಹವಾಮಾನ ಇಲಾಖೆಯು ಪ್ರಕಟಿಸಿದೆ. ಜೂನ್ ಒಂದರದು ಮುಂಗಾರು ಕೇರಳಕ್ಕೆ ಕಾಲಿಟ್ಟಿರುವುದಾಗಿ ಹವಾಮಾನ ಇಲಾಖೆ ಹೇಳಿದೆ.
ಜೂನ್ ಒಂದರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವುದು ರೂಢಿಯಾಗಿದ್ದರೂ ಬಹುತೇಕವಾಗಿ ಸರಿಯಾದ ದಿನಾಂಕದಂದೇ ಮುಂಗಾರು ಆಗಮಿಸುವುದಿಲ್ಲ. ಆದರೆ ಈ ಬಾರಿ ಮಾತ್ರ ಸರಿಯಾದ ದಿನಕ್ಕೇ ಕೇರಳಕ್ಕೆ ಕಾಲಿಟ್ಟಿದೆ. ಈ ದಶಕದಲ್ಲಿ ಇದು ಎರಡನೇ ಬಾರಿ ಈ ರೀತಿ ಜೂನ್ ಒಂದರಂದೇ ಮುಂಗಾರು ಆಗಮಿಸಿರುವುದಾಗಿದೆ. ಈ ಹಿಂದೆ 2013ರಲ್ಲಿ ಜೂನ್ ಒಂದರಂದು ಕೇರಳ ಪ್ರವೇಶಿಸಿತ್ತು.
ಪ್ರಸ್ತುತ ಕೇರಳದ ಒಂಭತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದೇವೇಳೆ, ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ವಾಯುಭಾರ ನಿಮ್ನತೆಯು ಚಂಡಮಾರುತವಾಗಿ ಬದಲಾಗಲಿದೆ. ಈ ‘ನಿಸರ್ಗ ’ ಹೆಸರಿನ ಚಂಡಮಾರುತ ಕೂಡ ಮುಂಗಾರುವಿನ  ಚಲನೆಗೆ ಪೂರಕವಾಗಿದೆಯೆಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ದಿನಗಳಲ್ಲಿ ಮುಂಗಾರು ದೇಶದ ಇತರ ಭಾಗಗಳಿಗೆ ಹಬ್ಬಲಿದೆಯೆಂದು ನಿರೀಕ್ಷಿಸಲಾಗಿದೆ.
ಈ ಬಾರಿ ಸಹಜ ಮುಂಗಾರು ಆಗಲಿದ್ದು, ಮಳೆಯ ಕೊರತೆ ಉಂಟಾಗಲಾರದೆಂದು ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ವೆದರ್ ಹೇಳಿವೆ. ಮುಂಗಾರು ಆಗಮನದ ಕುರಿತಾದ ಇವೆರಡೂ ಸಂಸ್ಥೆಗಳ ಭವಿಷ್ಯ ಕೂಡ ಬಹುಮಟ್ಟಿಗೆ ಈ ಬಾರಿ ನಿಖರವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!