ಹೊಸ ದಿಗಂತ ವರದಿ, ಕಾಸರಗೋಡು:
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ತಪಾಸಣೆ ನಡೆಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮಾದರಿಯ 2113 ಕೇಂದ್ರಗಳಿವೆ ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಈ ಪೈಕಿ 1425 ಸರಕಾರಿ ಲ್ಯಾಬ್ ಗಳು ಮತ್ತು 688 ಖಾಸಗಿ ಲ್ಯಾಬ್ ಗಳಾಗಿವೆ. ಇದರಲ್ಲಿ 57 ಲ್ಯಾಬ್ ಗಳಲ್ಲಿ ಆರ್ ಟಿಪಿಸಿಆರ್, 31 ಲ್ಯಾಬ್ ಗಳಲ್ಲಿ ಸಿಬಿನಾಟ್, 68 ರಲ್ಲಿ ಟ್ಯೂನಾಟ್, 1957 ರಲ್ಲಿ ಆಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ಪ್ರಥಮವಾಗಿ ವರದಿಯಾದ ಜನವರಿ 30 ರಂದು ಆಲಪ್ಪುಳ ಜಿಲ್ಲೆಯ ಎನ್ ಐವಿ ಕೇಂದ್ರದಲ್ಲಿ ಮಾತ್ರವಿದ್ದ ಕೊರೋನಾ ತಪಾಸಣಾ ವ್ಯವಸ್ಥೆಯು ಈಗ ರಾಜ್ಯದಾದ್ಯಂತ ವಿಸ್ತರಣೆಯಾಗಿದೆ. ಇದುವರೆಗೆ ಕೇರಳದಲ್ಲಿ 56 ಲಕ್ಷಕ್ಕಿಂತ ಹೆಚ್ಚು ಜನರನ್ನು ತಪಾಸಣೆ ನಡೆಸಲಾಗಿದೆ. ದಿನಂಪ್ರತಿ ತಪಾಸಣೆಗಳ ಸಂಖ್ಯೆ 73 ಸಾವಿರಕ್ಕೂ ಅಧಿಕವಾಗಿದೆ ಎಂದು ಆರೋಗ್ಯ ಸಚಿವೆ ವಿವರಿಸಿದರು. ಇನ್ನೊಂದೆಡೆ ಕೊರೋನಾ ಸೋಂಕು ನಿಯಂತ್ರಣದ ಅಂಗವಾಗಿ ಸರಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ನುಡಿದರು.