Sunday, August 14, 2022

Latest Posts

ಕೇರಳದಲ್ಲಿ ಆಗಸ್ಟ್ 17 ರಿಂದ ದೇವಾಲಯಗಳಿಗೆ ಭಕ್ತರ ಪ್ರವೇಶ ವ್ಯವಸ್ಥೆ: ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ

ತಿರುವನಂತಪುರ: ಭಾದ್ರಪದ ಮಾಸ ಆರಂಭಗೊಳ್ಳುವ ಆಗಸ್ಟ್ 17 ರಿಂದ ತಿರುವಾಂಕೂರು ದೇವಸ್ವಂ ಮಂಡಳಿ ವ್ಯಾಪ್ತಿಯ ಎಲ್ಲ ದೇವಾಲಯಗಳಿಗೆ ಭಕ್ತರ ಭೇಟಿಗೆ ಅವಕಾಶ ನೀಡಲು ದೇವಸ್ವಂ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಶಬರಿಮಲೆ ಹೊರತುಪಡಿಸಿ ಇತರ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಮಂಡಳಿಯು ಅನುಮತಿ ನೀಡಿದೆ. ಆದರೆ ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 6.30 ರಿಂದ ರಾತ್ರಿ 7ರ ನಡುವೆ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಒಮ್ಮೆಗೆ ಕೇವಲ ಐದು ಮಂದಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ನೂತನ ಆದೇಶ ಪ್ರಕಾರ ಅವಕಾಶ ನೀಡಲಾಗಿದೆ. 10 ವರ್ಷದೊಳಗಿನವರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇವಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಐದು ಮಂದಿ ದರ್ಶನ ಮಾಡಿ ಹೊರಗೆ ಬಂದ ನಂತರವೇ ಮುಂದಿನ ಐದು ಜನರನ್ನು ದೇವಸ್ಥಾನದೊಳಗೆ ಬಿಡಲಾಗುತ್ತದೆ. ದರ್ಶನಕ್ಕೆ ಹಾಜರಾಗುವ ಭಕ್ತರು ಮುಖವಾಡ ಧರಿಸಬೇಕು. ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಭಕ್ತರಿಗೆ ದೇವಾಲಯದ ಹೊರಗೆ ಸಾನಿಟೈಸರ್ ಬಳಸಿ ಕೈ ತೊಳೆಯಲು ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಲಾಗಿದೆ.
ಭಕ್ತರು ಅರ್ಪಣೆಗಳನ್ನು ಮಾಡಬಹುದು. ಆದರೆ ಪ್ರಸಾದವನ್ನು ದೇವಾಲಯದಿಂದ ನೇರವಾಗಿ ವಿತರಿಸಲಾಗುವುದಿಲ್ಲ. ವಿಶೇಷ ಕೌಂಟರ್‍ಗಳ ಮೂಲಕ ಮಾತ್ರ ಪ್ರಸಾದವನ್ನು ವಿತರಿಸಲಾಗುವುದು. ದೇವಾಲಯದ ಕೆರೆಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅಥವಾ ಕೈ ಕಾಲುಗಳನ್ನು ತೊಳೆಯಲು ಅವಕಾಶವಿಲ್ಲ. ದರ್ಶನವಾದ ಕೂಡಲೇ ಭಕ್ತರು ಹೊರಗೆ ಹೋಗಿ ಮುಂದಿನ ಭಕ್ತರಿಗೆ ಅನುವು ಮಾಡಿಕೊಡಬೇಕು. ಗರ್ಭಿಣಿಯರಿಗೆ ಮತ್ತು ಇತರ ಕಾಯಿಲೆ ಇರುವವರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ಆಗಸ್ಟ್ 17 ರಂದು ದೇವಸ್ವಂ ಬೋರ್ಡ್ ದೇವಾಲಯಗಳಲ್ಲಿ ವಿಶೇಷ ಗಣಪತಿ ಹೋಮವನ್ನು ನಡೆಸಲು ಮಂಡಳಿಯು ನಿರ್ಧರಿಸಿದೆ.
ದೇಗುಲಗಳಲ್ಲಿ ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅಲ್ಲದೆ ನೋಟೀಸ್ ಬೋರ್ಡ್ ಮೂಲಕ ಭಕ್ತರಿಗೆ ಸೂಚನೆಗಳನ್ನು ಎಲ್ಲ ದೇವಾಲಯಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಮಂಡಳಿಯು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss