ತಿರುವನಂತಪುರ: ಕೇರಳದಲ್ಲಿ ಸದ್ಯಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸಬೇಕಾದ ಅಗತ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲ 14 ಜಿಲ್ಲೆಗಳಲ್ಲೂ ಕೊರೋನಾ ವೈರಸ್ ಸೋಂಕು ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಆರೋಗ್ಯ ತುರ್ತು ಪರಿಸ್ಥಿತಿ ಅನುಷ್ಠಾನಕ್ಕೆ ತರುವಂತೆ ವೈದ್ಯರುಗಳ ಸಂಘಟನೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಕಳೆದ ದಿನ ಸರಕಾರಕ್ಕೆ ಆಗ್ರಹಿಸಿತ್ತು. ಆ ಬಗ್ಗೆ ಪ್ರತಿಕ್ರಿಯಿಸುತ್ತಾ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ಐಎಂಎ ಮಾಡಿರುವ ಆಗ್ರಹದ ಕುರಿತು ಇನ್ನಷ್ಟು ಹೆಚ್ಚು ಅಧ್ಯಯನ ನಡೆಸಬೇಕು. ಆ ಬಳಿಕವಷ್ಟೇ ಈ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು. ಆರೋಗ್ಯ ತಪಾಸಣೆ ನಡೆಸದೆ ಕೋವಿಡ್ ರೋಗ ಬಾಧಿತರನ್ನು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ವಿಷಯ ಈಗ ಪರಿಗಣನೆಯಲ್ಲಿ ಇಲ್ಲವೆಂದು ಸಿಎಂ ಹೇಳಿದರು.
ಅನ್ಯರಾಜ್ಯಗಳಿಂದ ಕೇರಳಕ್ಕೆ ವಲಸೆ ಕಾರ್ಮಿಕರನ್ನು ಕೆಲಸಕ್ಕಾಗಿ ಕರೆತರುವ ಉದ್ಯೋಗ ಮಾಲಕರೇ ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕೆಂದು ನಿರ್ದೇಶಿಸಲಾಗಿದೆ. ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಿಣರಾಯಿ ವಿಜಯನ್ ತಿಳಿಸಿದರು. ಅಲ್ಲದೆ ವಲಸೆ ಕಾರ್ಮಿಕರು ವಾಸಿಸುವ ಲೇಬರ್ ಕ್ಯಾಂಪ್ ಗಳಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾವುದು ಎಂದರು. ಎಲ್ಲ ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯದ ಆಕ್ಸಿಜನ್ ವ್ಯವಸ್ಥೆಯನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಇದೇ ವೇಳೆ ಹೇಳಿದರು.