Wednesday, August 10, 2022

Latest Posts

ಕೇರಳದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ರೋಗಾಣುನಾಶಕ ಮ್ಯಾಟ್

ಕಾಸರಗೋಡು: ಕೇರಳದಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ರೀತಿಯಲ್ಲಿ ಶ್ರಮ ಮುಂದುವರಿಯುತ್ತಿರುವ ಮಧ್ಯೆ ವಿಶೇಷ ಮ್ಯಾಟ್ ನಿರ್ಮಿಸುವ ಮೂಲಕ ರಾಜ್ಯ ಹುರಿಹಗ್ಗ ಮಂಡಳಿ (ಕಯರ್ ಬೋರ್ಡ್ ) ಎಲ್ಲರ ಗಮನ ಸೆಳೆದಿದೆ.
ರಿವರ್ಸ್ ಕ್ವಾರಂಟೈನ್ (ಸರಕಾರಿ ಕ್ವಾರಂಟೈನ್ ಬದಲು ಮನೆಗಳಲ್ಲಿ ನಿಗಾದಲ್ಲಿರುವುದು) ಸಂದರ್ಭದಲ್ಲಿ ಮನೆಗಳನ್ನು ಹೆಚ್ಚು ಶುಚಿಯಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಆಂಟಿ ಕೋವಿಡ್ ಹೆಲ್ತ್ ಪ್ಲಸ್ ಮ್ಯಾಟ್ ಗಳನ್ನು ಹುರಿಹಗ್ಗ ಮಂಡಳಿಯು ಮಾರುಕಟ್ಟೆಗೆ ಪೂರೈಸುತ್ತಿದೆ. ತಿರುವನಂತಪುರದ ಶ್ರೀ ಚಿತ್ತಿರಾ ವೈದ್ಯಕೀಯ ಕಾಲೇಜು ವಿದ್ಯಾಲಯದಲ್ಲಿ ಮತ್ತು ಎನ್ ಸಿಎಂಆರ್ ಐಆರ್ ತಪಾಸಣಾ ಕೇಂದ್ರದಲ್ಲಿ ನಡೆಸಲಾದ ಒಂದೂವರೆ ತಿಂಗಳ ಅಧ್ಯಯನದ ನಂತರ ತಯಾರಿಸಲಾದ ಮ್ಯಾಟ್ ಗಳನ್ನು ಆಲಪ್ಪುಳ ನಗರಸಭೆಯ ಆಶ್ರಮ ವಾರ್ಡ್ ನ 50 ಮನೆಗಳಲ್ಲಿ ಪರೀಕ್ಷಾರ್ಥವಾಗಿ ಬುಧವಾರದಿಂದ ಉಪಯೋಗಿಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಗತ್ಯದ ಬದಲಾವಣೆ ತಂದು ಜುಲೈ ತಿಂಗಳಲ್ಲಿ ಪೂರ್ಣರೂಪದಲ್ಲಿ ಮಾರುಕಟ್ಟೆಗೆ ಪೂರೈಸಲು ನಿರ್ಧರಿಸಲಾಗಿದೆ.
ರೋಗಾಣುನಾಶಕ ದ್ರವ ತುಂಬಿದ ಟ್ರೇಯಲ್ಲಿ ಪ್ರಕೃತಿದತ್ತ ನಾರುಗಳನ್ನು ಬಳಸಿ ಈ ಮ್ಯಾಟ್ ಗಳನ್ನು ತಯಾರಿಸಲಾಗುತ್ತಿದೆ. ಈ ಮ್ಯಾಟ್ ಗಳಲ್ಲಿ ಎರಡರಿಂದ ಐದು ಸೆಕೆಂಡುಗಳ ಕಾಲ ತುಳಿದು ಕಾಲು ಶುಚಿಗೊಳಿಸುವ ಮೂಲಕ ಕಾಲಿಗೆ ಅಂಟಿಕೊಳ್ಳುವ ರೋಗಾಣು ನಾಶಗೊಳ್ಳುತ್ತದೆ.
ತಿರುವನಂತಪುರದ ಶ್ರೀ ಚಿತ್ತಿರಾ ತಿರುನಾಳ್ ಇನ್ ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸಯನ್ಸ್ ಆಂಡ್ ಟೆಕ್ನಾಲಜಿ ತಜ್ಞರು ಹಾಗೂ ಎನ್ ಸಿಆರ್ ಎಂಐ ನಿರ್ದೇಶಿಸಿರುವ ಮಾನದಂಡಗಳನ್ನು ಅನುಸರಿಸಿ ತಯಾರಿಸುತ್ತಿರುವ ರೋಗಾಣುನಾಶಕ ದ್ರವವನ್ನು ಈ ಮ್ಯಾಟಿಗೆ ಬಳಸಲಾಗುತ್ತದೆ.
ಕಯರ್ ಮ್ಯಾಟ್, ಟ್ರೇ, ರೋಗಾಣುನಾಶಕ ದ್ರವವನ್ನು ಒಂದು ಕಿಟ್ ಆಗಿ ವಿತರಣೆಗೆ ಪೂರೈಸಲಾಗುತ್ತದೆ. ಮನೆಗಳಿಗೆ ಉಪಯೋಗಿಸುವ ಮ್ಯಾಟ್ ಒಳಗೊಂಡ ಟ್ರೇಗೆ 3 ಲೀಟರ್ ಹಾಗೂ ಸಂಘ ಸಂಸ್ಥೆಗಳಿಗೆ ಉಪಯೋಗಿಸುವ ಟ್ರೇಗೆ 10 ಲೀಟರ್ ಸ್ಯಾನಿಟೈಸಿಂಗ್ ಸೊಲ್ಯೂಷನ್ ಬಳಸಲಾಗುತ್ತಿದೆ. ಈ ರೀತಿಯಾಗಿ ಏಳು ದಿನಗಳ ಕಾಲ ಸ್ಯಾನಿಟೈಸರ್ ದ್ರವ ಬದಲಾಯಿಸದೆ ಮ್ಯಾಟ್ ಬಳಸಬಹುದಾಗಿದೆ.
ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಹಣಕಾಸು ಖಾತೆ ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ಅವರು ಹುರಿಹಗ್ಗ ಮಂಡಳಿಯ ಕಾರ್ಯದರ್ಶಿ ಎಂ.ಕುಮಾರ್ ರಾಜ್ ಅವರಿಗೆ ಈ ನೂತನ ಮಾದರಿಯ ಮ್ಯಾಟ್ ಗಳನ್ನು ಹಸ್ತಾಂತರಿಸುವ ಮೂಲಕ ಮ್ಯಾಟ್ ವಿತರಣೆ ಯೋಜನೆಯನ್ನು ಉದ್ಘಾಟಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss