ತಿರುವನಂತಪುರ: ಕೇರಳದಲ್ಲಿ ಕೊರೋನಾ ವೈರಸ್ ಸೋಂಕು ವಿಪರೀತವಾಗಿ ಹರಡುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ. ರಾಜ್ಯದಲ್ಲಿ ಈ ವೈರಾಣು ಎಷ್ಟು ಸಮಯದ ವರೆಗೆ ಮುಂದುವರಿಯಲಿದೆ ಎಂಬ ಬಗ್ಗೆ ಸ್ಪಷ್ಟವಾದ ಅರಿವು ಹಾಗೂ ಖಾತರಿ ಇಲ್ಲ. ಆದರೂ ಕೇರಳದಲ್ಲಿ ಲಾಕ್ ಡೌನ್ ಜಾರಿಗೊಳಿಸುವುದು ಪ್ರಾಯೋಗಿಕ ವ್ಯವಸ್ಥೆ ಅಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಹಾಗೂ ಇಡೀ ನಾಡನ್ನು ಸಂರಕ್ಷಿಸಲು ಸರಕಾರವು ಇನ್ನಷ್ಟು ಕಟ್ಟುನಿಟ್ಟಿನ ಕೋವಿಡ್ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಆದ್ದರಿಂದ ಜಾರಿಯಲ್ಲಿರುವ ಕೊರೋನಾ ಮಾನದಂಡಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಭಾವನೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೋನಾ ರೋಗ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ವೈರಾಣುವಿನ ಆರಂಭದ ಕಾಲಘಟ್ಟದಲ್ಲಿ ಜನರು ಭಯಪಡುತ್ತಿದ್ದರು. ಆದರೆ ಈಗ ಸ್ಥಿತಿಗತಿ ಬದಲಾಗಿದೆ ಎಂದು ಅವರು ನುಡಿದರು.