Thursday, August 11, 2022

Latest Posts

ಕೇರಳದಲ್ಲಿ ಕೋವಿಡ್ ತಡೆಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿ: ಸಾರ್ವಜನಿಕ ಸಾರಿಗೆಗೆ ಯಾವುದೇ ಅಡಚಣೆ ಇಲ್ಲ

ತಿರುವನಂತಪುರ: ಕೇರಳದಲ್ಲಿ ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಷೇಧ ಕ್ರಮಗಳನ್ನು ಘೋಷಿಸಲಾಗಿದೆ. ಅದರಂತೆ ಎರ್ನಾಕುಳಂ, ತಿರುವನಂತಪುರ, ಕಲ್ಲಿಕೋಟೆ, ಕೋಟ್ಟಾಯಂ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಕಟ್ಟುನಿಟ್ಟಿನ ನಿಯಂತ್ರಣ ವ್ಯವಸ್ಥೆಯು ಶನಿವಾರದಿಂದ ಜಾರಿಗೆ ಬಂದಿದೆ. ನಿಷೇಧವು ಒಂದು ತಿಂಗಳ ಕಾಲ ಅನುಷ್ಠಾನದಲ್ಲಿ ಇರಲಿದೆ.
ಇದೇ ವೇಳೆ ಕಾಸರಗೋಡು ಜಿಲ್ಲೆಯೂ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಯಾವುದೇ ಅಡಚಣೆ ಇರದು.
ಉಳಿದಂತೆ ಕಂಟೈನ್ ಮೆಂಟ್ ವಲಯಗಳ ಒಳಗೆ ಮತ್ತು ಹೊರಗೆ ಜನರು ಒಗ್ಗೂಡಬಾರದು. ಐದಕ್ಕೂ ಹೆಚ್ಚು ಜನರ ಗುಂಪುಗಳನ್ನು ನಿಷೇಧಿಸಲಾಗಿದೆ. ಆದರೆ ಅಂಗಡಿಗಳು, ಬ್ಯಾಂಕ್ ಗಳು ಮತ್ತು ಸರಕಾರಿ, ಖಾಸಗಿ ಸಂಸ್ಥೆಗಳು ತೆರೆದಿರುತ್ತವೆ. ಲೋಕ ಸೇವಾ ಆಯೋಗ ಸಹಿತ ಇತರ ಪರೀಕ್ಷೆಗಳನ್ನು ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಅಂತಿಮ ಸಂಸ್ಕಾರದಲ್ಲಿ 20 ಜನರು ಮತ್ತು ಮದುವೆಯಲ್ಲಿ 50 ಜನರು ಹಾಜರಾಗಬಹುದು. ಸರಕಾರಿ ಮತ್ತು ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗಲು 20ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವರು. ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಇತರ ಅಂಗಡಿಗಳಲ್ಲಿ ಐದಕ್ಕಿಂತ ಅಧಿಕ ಜನರು ಗುಂಪುಗೂಡಿರುವುದು ಕಂಡುಬಂದಲ್ಲಿ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಸಾರ್ವಜನಿಕ ಸಾರಿಗೆ, ಕಚೇರಿಗಳು, ಅಂಗಡಿಗಳು, ರೆಸ್ಟೋರೆಂಟ್‍ಗಳು, ಕೆಲಸದ ಸ್ಥಳಗಳು, ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಬ್ರೇಕ್ ದಿ ಚೈನ್ ಮಾರ್ಗಸೂಚಿಗಳು ಮತ್ತು ಸಾಮಾಜಿಕ ಅಂತರಕ್ಕೆ ಅನುಸಾರವಾಗಿ ಕಟ್ಟುನಿಟ್ಟಾದ ನಿಬಂಧನೆಗಳ ಅಡಿಯಲ್ಲಿ ಮಾತ್ರ ನಡೆಸಬೇಕು ಎಂದು ರಾಜ್ಯ ಸರಕಾರವು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss