Monday, July 4, 2022

Latest Posts

ಕೇರಳದಲ್ಲಿ ಕೋವಿಡ್ ಸೋಂಕಿತರು, ಕ್ವಾರಂಟೈನ್ ನವರಿಗೆ ಮತ ಚಲಾಯಿಸಲು ಮಾರ್ಗಸೂಚಿ ಪ್ರಕಟ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಮುಂದುವರಿಯುತ್ತಿರುವಂತೆ ಕೋವಿಡ್ ಸೋಂಕಿತರಿಗೂ ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಮತದಾನದ ಹಿಂದಿನ ದಿನ ಮುಂಜಾನೆ 3 ಗಂಟೆಯ ವರೆಗೆ ಕೋವಿಡ್ ದೃಢಪಟ್ಟವರಿಗೆ ಈ ವ್ಯವಸ್ಥೆಯ ಪ್ರಯೋಜನ ಲಭಿಸಲಿದೆ. ಇದೇ ವೇಳೆ ಕೊರೋನಾ ಸೋಂಕಿಗೆ ಒಳಗಾದವರು ನೇರವಾಗಿ ಬೂತ್‍ಗೆ ಹೋಗಿ ಕೊನೆಯ ಗಳಿಗೆಯಲ್ಲಿ ಮತ ಚಲಾಯಿಸಬಹುದು ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಅಂಚೆ ಮತದಾನದ ಕಾರ್ಯವಿಧಾನಗಳನ್ನು ಚುನಾವಣಾ ಆಯೋಗವು ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ರೋಗಿಗಳ ಮತ್ತು ಸಂಪರ್ಕತಡೆಯಲ್ಲಿರುವವರ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಈ ಪಟ್ಟಿಯಲ್ಲಿ ಸೋಂಕು ದೃಢಪಟ್ಟವರು ಮತ್ತು ಮತದಾನದ ಹತ್ತು ದಿನಗಳ ಮೊದಲು ಹಾಗೂ ಮರುದಿನ ಮೂರು ಗಂಟೆಯವರೆಗೆ ಸಂಪರ್ಕತಡೆಯನ್ನು ಪ್ರವೇಶಿಸುವವರು ಸೇರಲಿದ್ದಾರೆ.
ವಿಶೇಷ ಮತಗಟ್ಟೆ ಅಧಿಕಾರಿ ಮತ್ತು ಅವರ ಸಹಾಯಕರು ಮತಪತ್ರವನ್ನು ಮನೆಗಳಿಗೆ ತಲುಪಿಸುವರು ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ. ಕೋವಿಡ್ ಸೋಂಕಿತರಿಗೆ ಮೊದಲು ಅರ್ಜಿಯನ್ನು ಭರ್ತಿ ಮಾಡುವುದರ ಜೊತೆಗೆ ಅಫಿಡವಿಟ್ ಮತ್ತು ಬ್ಯಾಲೆಟ್ ಪೇಪರ್ ಲಭ್ಯವಿರುತ್ತದೆ. ಅಫಿಡವಿಟ್‍ನಲ್ಲಿ ಸಹಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ನಂತರ ಬ್ಯಾಲೆಟ್ ಪೇಪರ್ ಮತ್ತು ಅಫಿಡವಿಟ್ ನ್ನು ರಹಸ್ಯವಾಗಿ ದಾಖಲಿಸಬೇಕು. ಪ್ರತ್ಯೇಕ ಲಕೋಟೆಗಳಲ್ಲಿ ಅಂಟಿಸಿ ಎರಡನ್ನೂ ಸಂಬಂಧಪಟ್ಟ ಅಧಿಕಾರಿಗೆ ಹಸ್ತಾಂತರಿಸಬೇಕು.
ಮತಪತ್ರವನ್ನು ಹಿಂದಿರುಗಿಸಿದ ರಶೀದಿಯನ್ನು ಅಧಿಕಾರಿಗಳು ನೀಡುತ್ತಾರೆ. ಮತದಾನದ ಹಿಂದಿನ ದಿನ ಸಂಜೆ 6 ಗಂಟೆಯ ಮೊದಲು ಎಲ್ಲರೂ ಮತಪತ್ರವನ್ನು ತಲುಪಿಸಬೇಕು. ಹಿಂದಿನ ದಿನ ಮಧ್ಯಾಹ್ನ 3 ಗಂಟೆಯ ನಂತರ ಸೋಂಕು ದೃಢೀಕರಿಸಿದವರು ಮತದಾನದ ದಿನದಂದು ಸಂಜೆ 5 ರಿಂದ 6 ಗಂಟೆಯ ನಡುವೆ ನೇರವಾಗಿ ಬೂತ್‍ಗೆ ಬಂದು ಮತ ಚಲಾಯಿಸಬಹುದು. ಅಂಚೆ ಮತದಾನಕ್ಕೆ ನೇರವಾಗಿ ಅರ್ಜಿ ಸಲ್ಲಿಸುವ ಕೋವಿಡ್ ರೋಗಿಗಳು ಆರೋಗ್ಯ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss