ಕಾಸರಗೋಡು: ಕೇರಳದಲ್ಲಿ ಆಳಸಮುದ್ರ ಮೀನುಗಾರಿಕೆಗೆ ಹೇರಿದ್ದ ನಿಷೇಧ ಮಂಗಳವಾರಕ್ಕೆ ಅಂತ್ಯವಾಗಿದೆ. ಅಲ್ಲದೆ ಆಗಸ್ಟ್ 5 ಬುಧವಾರದಿಂದ ಮತ್ತೆ ಮೀನುಗಾರಿಕೆ ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಏರ್ಪಡಿಸಲಾಗಿದೆ.
ಜೂನ್ 9ರಿಂದ ಜುಲೈ 31ರ ವರೆಗೆ ಮೊದಲ ಹಂತದಲ್ಲಿ ಟ್ರೋಲಿಂಗ್ ನಿಷೇಧಿಸಲಾಗಿತ್ತು. ಬಳಿಕ ಕೊರೋನಾ ಸೋಂಕು ವ್ಯಾಪಿಸಿದ ಕಾರಣ ಸರಕಾರವು ನಿಷೇಧವನ್ನು ಮುಂದುವರಿಸಿ, ನಂತರ ಆಗಸ್ಟ್ 5ರಿಂದ ಎಲ್ಲ ಬೋಟ್ ಗಳಿಗೂ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಹುದೆಂದು ತಿಳಿಸಿತ್ತು. ಅದರಂತೆ ಮೀನುಗಾರಿಕೆಗೆ ತೆರಳಲು ದೋಣಿ ಮಾಲೀಕರು ಹಾಗೂ ಕಾರ್ಮಿಕರು ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಇದೇ ವೇಳೆ ಕೋವಿಡ್ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದಲ್ಲಿ ಆಳಸಮುದ್ರ ಮೀನುಗಾರಿಕೆ ಸಂದರ್ಭ ಕೆಲವೊಂದು ನಿಯಂತ್ರಣಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರಕಾರವು ಸೂಚನೆ ನೀಡಿದೆ.