ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಐವರಿಗೆ ಸಹಿತ ಕೇರಳದಲ್ಲಿ ಭಾನುವಾರ 53 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಐವರು ಗುಣಮುಖರಾಗಿದ್ದಾರೆ.
ತಿರುವನಂತಪುರ, ಕಣ್ಣೂರು ಜಿಲ್ಲೆಯಲ್ಲಿ ತಲಾ 12, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಐದು ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ಆಲಪ್ಪುಳ, ಎರ್ನಾಕುಳಂ, ಪಾಲ್ಘಾಟ್ ಜಿಲ್ಲೆಗಳಲ್ಲಿ ತಲಾ 4, ಕೊಲ್ಲಂ ಜಿಲ್ಲೆಯಲ್ಲಿ 3, ಪತ್ತನಂತಿಟ್ಟ 2, ಕಲ್ಲಿಕೋಟೆ ಜಿಲ್ಲೆಯಲ್ಲಿ ಒಬ್ಬರಿಗೆ ರೋಗ ಬಾಧಿಸಿದೆ. ಅಲ್ಲದೆ ತಮಿಳುನಾಡು ನಿವಾಸಿಗೂ ರೋಗ ದೃಢೀಕರಿಸಲಾಗಿದೆ.
18 ಮಂದಿ ವಿದೇಶದಿಂದ (ಒಮಾನ್-2, ಯುಎಇ-11, ಸೌದಿ ಅರೇಬಿಯಾ-3, ಕುವೈಟ್-1), 29 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ-19, ಗುಜರಾತ್-5, ತಮಿಳುನಾಡು-3, ಹೊಸದಿಲ್ಲಿ-1, ಮಧ್ಯಪ್ರದೇಶ-1) ಬಂದವರು. ಸಂಪರ್ಕದಿಂದ ಐವರಿಗೆ ರೋಗ ಬಾಧಿಸಿದೆ. ಇದರಲ್ಲಿ ಒಬ್ಬರು ಪಾಲ್ಘಾಟ್ ಜಿಲ್ಲೆಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಈ ಮಧ್ಯೆ ಕೋವಿಡ್-19 ರೋಗ ದೃಢೀಕರಿಸಿದ್ದ ಕಲ್ಲಿಕೋಟೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಯನಾಡು ನಿವಾಸಿ ಮಹಿಳೆ ಸಾವಿಗೀಡಾದರು. ಮೇ 20 ರಂದು ದುಬೈಯಿಂದ ಕೇರಳದಲ್ಲಿ ಚಿಕಿತ್ಸೆಗೆ ತಲುಪಿದ ಈಕೆ ಕ್ಯಾನ್ಸರ್ ರೋಗಿಯೂ ಆಗಿದ್ದರು.
ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ಐವರು ಗುಣಮುಖರಾಗಿದ್ದಾರೆ. ವಯನಾಡು ಜಿಲ್ಲೆಯ ಮೂವರು ಹಾಗೂ ಕಾಸರಗೋಡು ಜಿಲ್ಲೆಯ ಇಬ್ಬರು ಗುಣಮುಖರಾದವರು. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 322 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ ರಾಜ್ಯದಲ್ಲಿ 520 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 95394 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 94,662 ಮಂದಿ ಮನೆಗಳಲ್ಲೂ ಮತ್ತು ಇನ್ಸ್ಟಿಟ್ಯೂಶನಲ್ ಕ್ವಾರೆಂಟೈನ್ನಲ್ಲಿದ್ದಾರೆ. 732 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ.
ಭಾನುವಾರ ಶಂಕಿತ 188 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 53873 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು , ಲಭ್ಯ 52355 ನೆಗೆಟಿವ್ ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಹೊಸದಾಗಿ ಕೋಡೋಂ ಬೇಳೂರು ಪ್ರದೇಶವನ್ನು ಹಾಟ್ ಸ್ಪಾಟ್ ಯಾದಿಯಲ್ಲಿ ಸೇರಿಸಲಾಗಿದ್ದು , ಒಟ್ಟು ರಾಜ್ಯದಲ್ಲಿ ಹಾಟ್ಸ್ಪಾಟ್ ಪ್ರದೇಶಗಳ ಸಂಖ್ಯೆ 55 ಕ್ಕೇರಿತು.
ವಿದೇಶದಿಂದ ಮತ್ತು ಇತರ ರಾಜ್ಯಗಳಿಂದ ರಾಜ್ಯಕ್ಕೆ 93404 ಮಂದಿ ಆಗಮಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಐವರಿಗೆ ಸೋಂಕು
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 5 ಮಂದಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿದೆ. ಇಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.
ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರದಿಂದ ಆಗಮಿಸಿದವರು. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಿಕೆ ನಿವಾಸಿಗಳು, 60 ವರ್ಷದ ವರ್ಕಾಡಿ ನಿವಾಸಿ ಸೋಂಕು ಖಚಿತಗೊಂಡವರು. ಇವರೆಲ್ಲರೂ ಪುರುಷರು.
ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ಮತ್ತು ಕುಂಬಳೆ ನಿವಾಸಿ 41 ವರ್ಷದ ವ್ಯಕ್ತಿ ಗುಣಮುಖರಾದವರು. ಇವರಲ್ಲಿ ಕುಂಬಳೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಸೋಂಕು ತಗುಲಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. ಮೂರನೇ ಹಂತದ ಕೋವಿಡ್ ರೋಗ ಬಾಧಿತರಲ್ಲಿ ಜಿಲ್ಲೆಯಲ್ಲಿ ಈ ವರೆಗೆ ವರದಿಯಾಗಿರುವ 36 ಕೇಸುಗಳಲ್ಲಿ 21 ಮಂದಿಯೂ ಮಹಾರಾಷ್ಟ್ರದಿಂದ ಆಗಮಿಸಿದವರು.
ಜಿಲ್ಲೆಯಲ್ಲಿ 3020 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2481 ಮಂದಿ, ಆಸ್ಪತ್ರೆಗಳಲ್ಲಿ 539 ಮಂದಿ ನಿಗಾದಲ್ಲಿದ್ದಾರೆ. 104 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 6199 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ಇದೀಗ ಕಾಸರಗೋಡು ಜಿಲ್ಲೆಯ 32 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.