ತಿರುವನಂತಪುರ: ಕೇರಳದಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ದೊಡ್ಡ ಪ್ರಮಾಣದಲ್ಲಿ ಹ್ಯಾಕ್ ಮಾಡಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ವ್ಯಾಪಕವಾಗಿ ಹ್ಯಾಕ್ ಮಾಡಲಾಗುತ್ತಿರುವುದನ್ನು ಪೊಲೀಸ್ ಇಲಾಖೆಯ ಸೈಬರ್ ಸೆಲ್ ವಿಭಾಗವು ಗಮನಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸುರಕ್ಷಿತಗೊಳಿಸಲು ಎರಡು ಅಂಶಗಳನ್ನು ಸಕ್ರಿಯಗೊಳಿಸಬೇಕು ಎಂದು ಸೈಬರ್ ಸೆಲ್ ವಿಭಾಗವು ತಿಳಿಸಿದೆ. ವಾಟ್ಸಪ್ಪ್ ಬಳಕೆದಾರರಿಗೆ ಈ ಎರಡು ಅಂಶಗಳ ದೃಢೀಕರಣಕ್ಕಾಗಿ ಭದ್ರತಾ ಪಿನ್ ಸಂಖ್ಯೆಯನ್ನು ಸೇರಿಸಲು ಸೂಚಿಸಲಾಗಿದೆ. ಜೊತೆಗೆ ವಾಟ್ಸಪ್ಪ್ ಗೆ ತಮ್ಮದೇ ಇಮೇಲ್ ಐಡಿಯನ್ನು ಬಳಸಲು ತಿಳಿಸಲಾಗಿದೆ.
ಇತ್ತೀಚೆಗೆ ರಾಜ್ಯಾದ್ಯಂತ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಿದ ವರದಿಗಳು ಕೇಳಿಬಂದಿದ್ದವು. ಅಲ್ಲದೆ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಎಂ.ಸಧೀರನ್ ಅವರ ಖಾತೆಯನ್ನು ಕೂಡ ಹ್ಯಾಕ್ ಮಾಡಲಾಗಿತ್ತು. ವಿ.ಎಂ.ಸುಧೀರನ್ ಅವರ ಫೇಸ್ ಬುಕ್ ಪೇಜ್ ನ್ನು ಕಳೆದ ಕೆಲವು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿತ್ತು.
ವಿಷಯ ತನ್ನ ಗಮನಕ್ಕೆ ಬಂದ ಕೂಡಲೇ ಫೇಸ್ ಬುಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಿಯಂತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಕೇರಳದಲ್ಲಿ ಇಂತಹ ಹಲವಾರು ಘಟನೆಗಳು ಪದೇ ಪದೇ ವರದಿಯಾಗುತ್ತಿದ್ದು , ಸಾಮಾಜಿಕ ಮಾಧ್ಯಮ ಖಾತೆ ಹೊಂದಿದ ಪ್ರತಿಯೊಬ್ಬರೂ ಗರಿಷ್ಠ ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.