Thursday, August 11, 2022

Latest Posts

ಕೇರಳದಲ್ಲಿ ಸ್ನೇಹಸ್ಪರ್ಶಂ ಯೋಜನೆ: ಮದುವೆಯಾಗದ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂ.

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಅವಿವಾಹಿತ ಸ್ತ್ರೀಯರ ಅಭಿವೃದ್ಧಿಯ ಗುರಿಯೊಂದಿಗೆ ಪ್ರಾರಂಭಿಸಲಾದ ಸ್ನೇಹಸ್ಪರ್ಶಂ ಯೋಜನೆಗೆ ಹಣಕಾಸು ಇಲಾಖೆಯು 3.03 ಕೋಟಿ ರೂಪಾಯಿ ಅನುದಾನ ಒದಗಿಸಿದೆ ಎಂದು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ, ಪ್ರಸ್ತುತ ಯೋಜನೆಗೆ 3,03,48,000 ರೂಪಾಯಿ ನಿಧಿ ಮಂಜೂರಾಗಿದೆ ಎಂದರು.
ಶೋಷಣೆಗೆ ಒಳಗಾದ ಅವಿವಾಹಿತ ತಾಯಂದಿರು ತಮ್ಮ ಕುಟುಂಬ ಮತ್ತು ಸಮಾಜದಿಂದ ಪ್ರತ್ಯೇಕವಾಗಿ ಬದುಕಬೇಕಾಗುತ್ತದೆ. ಅಂತಹ ಜನರಿಗೆ ಅವರ ದೈನಂದಿನ ಜೀವನಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಪುನರ್ವಸತಿ ಕಲ್ಪಿಸಲು ಕೂಡ ಈ ಯೋಜನೆಯ ಮೂಲಕ ನಿರ್ಧರಿಸಲಾಗಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಎಡರಂಗ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಈ ಆರ್ಥಿಕ ಸಹಾಯವನ್ನು ತಿಂಗಳಿಗೆ 1000 ರೂ. ನಿಂದ 2000 ರೂ. ಆಗಿ ಹೆಚ್ಚಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅವಿವಾಹಿತ ತಾಯಂದಿರಿಗೆ ಮಾತ್ರ ಲಭ್ಯವಿದ್ದ ಈ ಯೋಜನೆಯ ಪ್ರಯೋಜನವನ್ನು ನಂತರ ಇತರ ವಿಭಾಗಗಳ ಅವಿವಾಹಿತ ಬಡ ತಾಯಂದಿರಿಗೂ ವಿಸ್ತರಿಸಲು ತಿದ್ದುಪಡಿ ಮಾಡಲಾಯಿತು. ಈ ಕುರಿತ ಅರ್ಜಿಯು ಸಂಬಂಧಪಟ್ಟ ಸಾಮಾಜಿಕ ನ್ಯಾಯ ಇಲಾಖೆಯ ಕಚೇರಿಯಲ್ಲಿ ಮತ್ತು ಸಾಮಾಜಿಕ ಭದ್ರತಾ ಮಿಷನ್ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಅಗತ್ಯದ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಅಥವಾ ಜಿಲ್ಲಾ ಸಾಮಾಜಿಕ ನ್ಯಾಯ ವಿಭಾಗದ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss