Saturday, August 13, 2022

Latest Posts

ಕೇರಳದಲ್ಲಿ ಹಕ್ಕಿಜ್ವರ: ಕೋಳಿಗಳಿಗೆ ದಕ್ಷಿಣ ಕನ್ನಡದಲ್ಲಿ ನಿರ್ಬಂಧ

ಹೊಸ ದಿಗಂತ ವರದಿ, ಮಂಗಳೂರು:

ಕೇರಳದ ಕೊಟ್ಟಾಯಂನಲ್ಲಿ ಬಾತುಕೋಳಿಗಳು ಶಂಕಿತ ಹಕ್ಕಿ ಜ್ವರದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವನ್ನು ಬಿಗಿಗೊಳಿಸಲಾಗಿದೆ. ಅಲ್ಲದೆ ಕೇರಳದಿಂದ ಬಾತುಕೋಳಿ ಸೇರಿದಂತೆ ಇತರ ಕೋಳಿಗಳನ್ನು ಜಿಲ್ಲೆಗೆ ಸಾಗಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.
ಕೇರಳದಿಂದ ದ.ಕ. ಪ್ರವೇಶಿಸುವ ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಿದೆ. ಜಿಲ್ಲೆಯಿಂದ ಕೇರಳಕ್ಕೆ ಕೋಳಿ ಸಾಗಾಟಕ್ಕೆ ಅವಕಾಶವಿದ್ದರೂ ಆ ವಾಹನಗಳು ವಾಪಾಸು ಬರುವಾಗ ಸಂಪೂರ್ಣ ಸ್ಯಾನಿಟೈಸ್ ಆಗಿಯೇ ಪ್ರವೇಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಂಭಾವ್ಯ ಹಕ್ಕಿ ಜ್ವರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ರೋಗ ನಿಯಂತ್ರಣ ಸಮಿತಿಯನ್ನು ಕೂಡ ರಚಿಸಲಾಗಿದೆ.
ಕೇರಳದಿಂದ ದ.ಕ. ಜಿಲ್ಲೆಗೆ ಹಕ್ಕಿ ಜ್ವರ ಹರಡುವ ಸಾಧ್ಯತೆ ಕಡಿಮೆಯಾದರೂ ಮುಂಜಾಗ್ರತಾ ಕ್ರಮವನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ಕೋಳಿ ಫಾರಂಗಳಲ್ಲಿ ಜ್ವರ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಹೆಲ್ಪ್‌ಲೈನ್ ಕೂಡ ತೆರೆಯಲಾಗಿದೆ. ಸಾರ್ವಜನಿಕರು ಹಕ್ಕಿ ಜ್ವರಕ್ಕೆ ಸಂಬಂಧಿಸಿ ನೇರವಾಗಿ ಮಾಹಿತಿ ನೀಡಬಹುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss