ತಿರುವನಂತಪುರ: ರಾಜ್ಯದಲ್ಲಿ ಪಾಕಿಸ್ಥಾನಿ ಉಗ್ರಗಾಮಿಗಳು ಸಕ್ರಿಯವಾಗಿ ಭೂಗತ ಸಂಚಿನಲ್ಲಿ ತೊಡಗಿರುವ ಬಗ್ಗೆ ಗುಪ್ತಚರ ವಿಭಾಗಕ್ಕೆ ವರ್ಷಗಳ ಹಿಂದೆಯೇ ಸ್ಪಷ್ಟ ಮಾಹಿತಿ ಲಭಿಸಿರುವಂತೆಯೇ ಅದನ್ನು ಇನ್ನಷ್ಟು ಪುಷ್ಟೀಕರಿಸುವ ರೀತಿಯಲ್ಲಿ ಪಾಕ್ ನಿರ್ಮಿತ ಗುಂಡುಗಳು ಪತ್ತೆಯಾಗಿವೆ.
ತಿರುವನಂತಪುರ – ತೇನ್ಮಲ ರಾಜ್ಯ ಹೆದ್ದಾರಿಯಲ್ಲಿ ಕೊಲ್ಲಂ ಕುಳತ್ತೂಪುಳ ಅರಣ್ಯದ ರಸ್ತೆಯಲ್ಲಿ ಪಾಕಿಸ್ಥಾನ ನಿರ್ಮಿತವೂ ಸೇರಿದಂತೆ 14 ಗುಂಡುಗಳು ಪತ್ತೆಯಾದ ಅರಣ್ಯ ಮತ್ತು ಪರಿಸರ ಪ್ರದೇಶಗಳಲ್ಲಿ ಬಾಂಬ್ ಸ್ಕ್ಯಾಡ್, ಶ್ವಾನದಳವೂ ವ್ಯಾಪಕ ಶೋಧ ಆರಂಭಿಸಿದೆ. ಪಾಕ್ ನಿರ್ಮಿತ ಗುಂಡುಗಳು ಪತ್ತೆಯಾಗಿರುವುದರ ಹಿಂದೆ ಉಗ್ರಗಾಮಿಗಳ ಸ್ಪಷ್ಟ ಕೈವಾಡವಿರುವುದಾಗಿಯೂ ಬಲವಾದ ಶಂಕೆ ಉಂಟಾಗಿದೆ. ಕೊಲ್ಲಂ ರೂರಲ್ ಎಸ್ಪಿಯವರ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪಿಒಎಫ್ ಮೊಹರು: ಪತ್ತೆಯಾದ 14 ಗುಂಡುಗಳಲ್ಲಿ ಒಂದರಲ್ಲಿ ಪಿಒಎಫ್ (ಪಾಕಿಸ್ಥಾನ ಅರ್ಡಿನೆನ್ಸ್ ಫ್ಯಾಕ್ಟರಿ) ಮೊಹರನ್ನು ಈ ಬಗ್ಗೆ ಫೋರೆನ್ಸಿಕ್ ತನಿಖಾ ತಂಡ ನಡೆಸಿದ ಪರೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ.
ಭಾರತೀಯ ಸೇನಾ ವಿಭಾಗದ ಗುಂಡುಗಳಲ್ಲಿ ಐಒಎಫ್ (ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ) ಎಂದು ನಮೂದಿಸಲಾಗುತ್ತಿದೆ.
ಉಗ್ರ ನಿಗ್ರಹದಳ ಸ್ಕ್ವಾಡ್ಗೆ ಹಸ್ತಾಂತರ: ಪತ್ತೆಯಾದ ಗುಂಡುಗಳ ಪೈಕಿ 12ರನ್ನು ಪೌಚಲ್ (ಗುಂಡುಗಳನ್ನು ಇರಿಸುವ ಬೆಲ್ಟ್) ನಲ್ಲಿ ಇರಿಸಲಾಗಿತ್ತು. ಎರಡು ಗುಂಡುಗಳನ್ನು ಬೇರೆಯಾಗಿ ಇರಿಸಲಾಗಿತ್ತು. ಇವು ಲಾಂಗ್ ರೇಂಜ್ನಲ್ಲಿ ಗುಂಡು ಹಾರಿಸಬಲ್ಲ ಬಂದೂಕುಗಳಿಗೆ ಉಪಯೋಗಿಸುವ 7.62 ಎಂ.ಎಂ. ಗುಂಡುಗಳಾಗಿವೆ. ಅವುಗಳನ್ನು ಉಗ್ರ ನಿಗ್ರಹದಳ ಸ್ಕ್ವಾಡ್ಗೆ ಈಗ ಹಸ್ತಾಂತರಿಸಲಾಗಿದೆ.