ತಿರುವನಂತಪುರ: ಸಂಪರ್ಕದಿಂದ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಎಲ್ಲ ಸಮುದ್ರ ಕರಾವಳಿ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಸರಕಾರವು ಸಿದ್ಧತೆ ನಡೆಸುತ್ತಿದೆ ಎಂದು ಮೀನುಗಾರಿಕಾ ಖಾತೆ ಸಚಿವೆ ಜೆ.ಮೆರ್ಸಿಕುಟ್ಟಿ ಅಮ್ಮ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಸಮುದ್ರಕ್ಕೆ ತೆರಳಲು ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ರಾಜ್ಯದ ಐದು ಜಿಲ್ಲೆಗಳ ಕರಾವಳಿ ಪ್ರದೇಶಗಳ ತೀವ್ರ ನಿಗಾ ಕೇಂದ್ರಗಳಲ್ಲಿ ಸೋಮವಾರ ಸಂಜೆಯಿಂದ ಒಂದು ವಾರ ಕಾಲ ಟ್ರಿಪಲ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ, ಮಲಪ್ಪುರಂ ಎಂಬೀ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಟ್ರಿಪಲ್ ಲಾಕ್ ಡೌನ್ ಏರ್ಪಡಿಸಲಾಗಿದೆ ಎಂದು ಅವರು ನುಡಿದರು.
ಕರಾವಳಿ ಪ್ರದೇಶಗಳಲ್ಲಿ ದಿನಬಳಕೆ ಸಾಮಗ್ರಿಗಳನ್ನು ವಿತರಿಸುವ ಅಂಗಡಿಗಳು ಮಾತ್ರವೇ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ರಾತ್ರಿ 7ರಿಂದ ಮುಂಜಾನೆ 5ಗಂಟೆ ತನಕ ಪ್ರಯಾಣಕ್ಕೆ ನಿಷೇಧ ಹೇರಲಾಗುವುದು ಎಂದು ಸಚಿವೆ ವಿವರಿಸಿದರು. ಕ್ಷೇಮನಿಧಿ ಮಂಡಳಿಯಲ್ಲಿ ಸದಸ್ಯರಾಗಿರುವ ಎಲ್ಲ ಮೀನು ಕಾರ್ಮಿಕರಿಗೂ 3000 ರೂಪಾಯಿ ಸಹಾಯಧನವನ್ನು ಶೀಘ್ರವೇ ವಿತರಿಸಲಾಗುವುದು ಎಂದು ಸಚಿವೆ ಮೆರ್ಸಿಕುಟ್ಟಿ ಅಮ್ಮ ಇದೇ ಸಂದರ್ಭ ತಿಳಿಸಿದರು.