Wednesday, August 17, 2022

Latest Posts

ಕೇರಳದ ಕಂಟೈನ್ ಮೆಂಟ್ ವಲಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ: ಕಾಸರಗೋಡು ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ

ಕಾಸರಗೋಡು: ಕೇರಳದಲ್ಲಿ ಕೊರೋನಾ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಂಟೈನ್ ಮೆಂಟ್ ವಲಯ ಹಾಗೂ ಟ್ರಿಪಲ್ ಲಾಕ್ ಡೌನ್ ವ್ಯವಸ್ಥೆಯನ್ನು ಜಾರಿಗೊಳಿಸಲಾದ ಪ್ರದೇಶಗಳಲ್ಲಿ ರಾಜ್ಯ ಸರಕಾರವು ಪೊಲೀಸ್ ಇಲಾಖೆಗೆ ಇನ್ನಷ್ಟು ಹೆಚ್ಚಿನ ಅಧಿಕಾರ ನೀಡಿ ಆದೇಶ ಹೊರಡಿಸಿದೆ.
ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಮನೆಗಳಲ್ಲಿ ನಿಗಾ ವಹಿಸಿ, ಪ್ರಯಾಣ ಹೊರತುಪಡಿಸಿ ಮುಂತಾದ ಕೋವಿಡ್ ನಿಬಂಧನೆಗಳನ್ನು ಎಲ್ಲರೂ ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಬೇಕು. ಅಲ್ಲದೆ ಈ ಬಗ್ಗೆ ಸಮಾಜವು ಗರಿಷ್ಠ ಎಚ್ಚರಿಕೆ ವಹಿಸುವಂತೆ ಪೊಲೀಸರು ಗಮನಿಸಬೇಕು. ಪೊಲೀಸ್ ನಿಗಾ ಎಲ್ಲೆಡೆ ಮತ್ತಷ್ಟು ಬಿಗಿಗೊಳ್ಳಬೇಕು. ಕಂಟೈನ್ ಮೆಂಟ್ ವಲಯ ಹಾಗೂ ಟ್ರಿಪಲ್ ಲಾಕ್ ಡೌನ್ ಹೇರಲಾದ ಪ್ರದೇಶಗಳಲ್ಲಿ ರಸ್ತೆ ಸಂಚಾರವನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ಧರಿಸುವರು. ಮಾತ್ರವಲ್ಲದೆ ನಿಬಂಧನೆಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕುಂಬಳೆ, ಕಾಸರಗೋಡು, ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144ರ ಪ್ರಕಾರ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅದರಂತೆ ಕಾಸರಗೋಡು ಜಿಲ್ಲೆಯಲ್ಲಿ ಕರಂದಕ್ಕಾಡು, ಹೊಸ ಬಸ್ ನಿಲ್ದಾಣ ಪರಿಸರ, ಮಂಜೇಶ್ವರ ಗಡಿ ಪ್ರದೇಶ ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಹಲವೆಡೆಗಳಲ್ಲಿ ಬಾರಿಕೇಡ್ ಗಳನ್ನು ಇರಿಸಿ ಪೊಲೀಸರು ವಾಹನಗಳ ಬಿಗಿ ತಪಾಸಣೆ ಮತ್ತು ನಿಯಂತ್ರಣ ಹೇರುತ್ತಿದ್ದಾರೆ. ಸರಕು ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಪಡಿಸಲಾಗುತ್ತಿಲ್ಲ. ಆದರೆ ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಿ ಅಗತ್ಯದ ಕೆಲಸಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಅನಗತ್ಯ ಸಂಚರಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಜಿಲ್ಲೆಯ ಕಂಟೈನ್ ಮೆಂಟ್ ವಲಯಗಳಲ್ಲಿ ಎರಡು ದಿನಗಳಿಗೊಮ್ಮೆ ಮಾತ್ರವೇ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ವ್ಯಾಪಾರ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಉಳಿದ ಕಡೆಗಳಲ್ಲಿ ಎಲ್ಲ ದಿನ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ತನಕ ವ್ಯಾಪಾರ ಸಂಸ್ಥೆಗಳನ್ನು ತೆರೆಯಲು ಒಪ್ಪಿಗೆ ಕೊಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!