ಹೊಸ ದಿಗಂತ ವರದಿ, ತಿರುವನಂತಪುರ:
ಕೇರಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಭಡ್ತಿಗೊಳಿಸುವುದರೊಂದಿಗೆ ಓಪಿ ಸಹಿತ ವಿವಿಧ ಆರೋಗ್ಯ ಸೇವೆಗಳನ್ನು ಸಂಜೆ 6 ಗಂಟೆ ವರೆಗೆ ಒದಗಿಸಲಾಗುವುದು ಎಂದು ರಾಜ್ಯ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ.
ಸಮರ್ಪಕ ವೈದ್ಯರ ಸೇವೆ, ಉತ್ತಮ ಸೌಲಭ್ಯಗಳುಳ್ಳ ಲ್ಯಾಬ್, ಇಮ್ಯೂನಿಸೈಸೇಷನ್ ಕೊಠಡಿಗಳು, ರೋಗಿಗಳಿಗೆ ಕುಳಿತುಕೊಳ್ಳಲು ಸೌಕರ್ಯ, ಮಕ್ಕಳಿಗೆ ಎದೆ ಹಾಲುಣಿಸಲು ಕೊಠಡಿ ಮೊದಲಾದ ವಿಭಾಗಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವೆ ವಿವರಿಸಿದರು. ಈ ನಿಟ್ಟಿನಲ್ಲಿ ಅಗತ್ಯದ ಯೋಜನೆಗಳನ್ನು ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೇರಳದ 38 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಭಡ್ತಿಗೊಳಿಸುವ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ವಲಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರತ್ಯೇಕವಾಗಿ ಗಮನಿಸಲಾಗುತ್ತಿದೆ. ಎಲ್ಲ ರೋಗಿಗಳನ್ನೂ ಆರೋಗ್ಯ ಕೇಂದ್ರಗಳ ಮೂಲಕ ಆರೈಕೆ ಮಾಡಿ, ಆರೋಗ್ಯ ವಲಯದಲ್ಲಿ ಭಾರೀ ಬದಲಾವಣೆ ಮಾಡಲಾಗುವುದು ಎಂದು ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದರು. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ವಲಯವನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ಅವರು ನುಡಿದರು.