Thursday, August 11, 2022

Latest Posts

ಕೇರಳದ ಮೂನಾರ್’ನಲ್ಲಿ ಭೂಕುಸಿತ: 5 ಜನ ಸಾವು, ನೂರಾರು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ

ತಿರುವನಂತಪುರ: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮೂನಾರ್ ನ ರಾಜಮಲಾದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಮಾದರಿಯಲ್ಲಿ ಪೆಟ್ಟಿಮುಡಿ ಬೆಟ್ಟ ಶುಕ್ರವಾರ ಮುಂಜಾನೆ ಕುಸಿದು ಬಿದ್ದು ಐವರು ಮೃತಪಟ್ಟು ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ.
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 100ಕ್ಕೂ ಅಧಿಕ ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಇದುವರೆಗೆ ಐವರ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆಎಂದು ಕೇರಳ ಸರಕಾರ ತಿಳಿಸಿದೆ.
ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.

ಇದುವರೆಗೆ ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.

ಶುಕ್ರವಾರ ಮುಂಜಾನೆ ಈ ಮಹಾ ದುರಂತ ಸಂಭವಿಸಿದ್ದು , ನಿದ್ದೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ಸ್ಥಳಕ್ಕೆ ತಲುಪಲು ಕೂಡ ಸಾಧ್ಯವಾಗುತ್ತಿಲ್ಲ. ದುರಂತ ಸಂಭವಿಸಿದ ಬಳಿಕ ಇಡೀ ಪ್ರದೇಶ ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದು ಸಂಪರ್ಕ ಜಾಲಗಳು ಕಡಿತವಾಗಿವೆ. ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿಗಳು, ಎನ್ ಡಿಆರ್ ಎಫ್, ಕಂದಾಯ ಇಲಾಖೆ ಅಧಿಕಾರಿಗಳು, ಎಸ್ಟೇಟ್ ಕಾರ್ಮಿಕರು ಮತ್ತು ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲಾಧಿಕಾರಿ ಎಚ್.ದಿನೇಶನ್ ಅವರು ಮಾತನಾಡಿ, ರಕ್ಷಣಾ ಸಿಬ್ಬಂದಿಗಳನ್ನು ಪೆಟ್ಟುಮುಡಿಗೆ ಕಳುಹಿಸಲಾಗಿದ್ದು ಅಲ್ಲಿ ಜನರನ್ನು ಹುಡುಕುವ ಮತ್ತು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಮೂನಾರ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಇಡುಕ್ಕಿ ಜಿಲ್ಲೆಯ ಮೂನಾರ್ ಸಮೀಪದ ರಾಜಮಾಲಾದಲ್ಲಿ ಉಂಟಾಗಿರುವ ಭೂಕುಸಿತದ ಸಲುವಾಗಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯ ತ್ವರಿತವಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ಪರಿಹಾರ ಕಾರ್ಯಕ್ಕೆ ಹೆಲಿಕಾಪ್ಟರ್ ಸೇವೆ ಪಡೆಯಲು ಭಾರತೀಯ ವಾಯುಪಡೆಯನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss