ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಕ್ಟೋಬರ್ 1ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಹೆಸರು ಸೇರ್ಪಡೆಗೆ ಅಕ್ಟೋಬರ್ 27 ರಿಂದ 31ರ ವರೆಗೆ ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ತಿಳಿಸಿದ್ದಾರೆ. 941 ಗ್ರಾಮ ಪಂಚಾಯತ್ ಗಳು, 86 ನಗರಸಭೆಗಳು, 6 ಕಾರ್ಪೊರೇಷನ್ ಗಳಲ್ಲಿ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 1ರಂದು ಪ್ರಕಟಿಸಲಾಗಿತ್ತು. ಮತದಾರರ ಪಟ್ಟಿಯಿಂದ ಹೆಸರು ಹೊರತುಪಡಿಸಲು ಹಾಗೂ ತಿದ್ದುಪಡಿ ನಡೆಸಲು ಅರ್ಜಿ ಗಳನ್ನು ಅ.27ರಿಂದ ಸಲ್ಲಿಸಬಹುದಾಗಿದೆ. ಹೆಸರು ಸೇರ್ಪಡೆಗೆ ಹಾಗೂ ತಿದ್ದುಪಡಿ ನಡೆಸಲು lsgelection. Kerala. Gov.in ಎಂಬ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಮೃತಪಟ್ಟವರು ಹಾಗೂ ವಾಸವಿಲ್ಲದವರನ್ನು ಪಟ್ಟಿಯಿಂದ ಹೊರತುಪಡಿಸಲಿರುವ ಅರ್ಜಿಗಳನ್ನು ಫಾರ್ಮ್ 5ರಲ್ಲಿ ಹಾಗೂ ಫಾರ್ಮ್ 8ರಲ್ಲಿ ನೇರವಾಗಿಯೋ ಅಂಚೆಯ ಮೂಲಕವೋ ಆಯಾ ಇಲೆಕ್ಟರಲ್ ರಿಜಿಸ್ಟ್ರೇಶನ್ ಆಫೀಸರ್ ಗೆ ಸಲ್ಲಿಸಬೇಕು. ಅಕ್ಟೋಬರ್ 31ರ ವರೆಗೆ ಲಭಿಸುವ ಅರ್ಜಿಯನ್ನು ಪರಿಶೀಲಿಸಿ ನವೆಂಬರ್ 10 ರಂದು ಸಪ್ಲಿಮೆಂಟರಿ ಪಟ್ಟಿ ಪ್ರಕಟಿಸಲು ಎಲೆಕ್ಟರಲ್ ರಿಜಿಸ್ಟ್ರೇಶನ್ ಆಫೀಸರ್ ಗೆ ಆಯೋಗವು ನಿರ್ದೇಶಿಸಿದೆ. ಅಕ್ಟೋಬರ್ 1ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ 1,29,25,766 ಪುರುಷರು, 1,41,94,775 ಮಹಿಳೆಯರು, 289 ಮಂಗಳಮುಖಿಯರು ಸೇರಿ 2,71,20,823 ಮಂದಿ ಮತದಾರರಿದ್ದಾರೆ.