ಕಾಸರಗೋಡು: ಕೇರಳ ಎಡರಂಗ ಸರಕಾರದ ಧೋರಣೆ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ (ಎನ್ ಟಿಯು) ಬುಧವಾರ ಪ್ರಬಲ ಪ್ರತಿಭಟನೆ ಹಮ್ಮಿಕೊಂಡಿತು. ರಾಜ್ಯ ಸರಕಾರದ ನಾಗರಿಕ ಸೇವಾ ವಿರೋಧಿ ವರ್ತನೆಗಳಿಂದಾಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಶಿಕ್ಷಕರು ಮತ್ತು ಸರಕಾರಿ ನೌಕರರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಲಾಭವನ್ನು ಪಡೆದುಕೊಳ್ಳುವ ಮೂಲಕ ಕೇರಳ ಸರಕಾರವು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದರ ಜೊತೆಗೆ ಕಳೆದ ದಿನ ಹೊರಡಿಸಲಾದ ಅಸಾಮಾನ್ಯ ಗಜೆಟ್ ಅಧಿಸೂಚನೆಯಿಂದ ಸರಕಾರಿ ನೌಕರರಿಗೆ ಮತ್ತೊಂದು ಹೊಡೆತ ನೀಡಲಾಗಿದೆ.
ಅಲ್ಲದೆ ಪಿಂಚಣಿ ಸೌಲಭ್ಯಗಳನ್ನು ಕಡಿತಗೊಳಿಸುವ ಸರಕಾರದ ನೀತಿಯನ್ನು ವಿರೋಧಿಸಿ ದೇಶೀಯ ಅಧ್ಯಾಪಕ ಪರಿಷತ್ ನ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಬದಿಯಡ್ಕದಲ್ಲಿರುವ ಕುಂಬಳೆ ಶಿಕ್ಷಣ ವಿದ್ಯಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಎನ್ ಟಿಯು ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್, ಜಿಲ್ಲಾ ಸಮಿತಿ ಸದಸ್ಯ ಪುರುಷೋತ್ತಮ ಕುಲಾಲ್, ಉಪಜಿಲ್ಲಾ ಕಾರ್ಯದರ್ಶಿ ಶರತ್ ಕುಮಾರ್, ಉಪಜಿಲ್ಲಾ ಸಮಿತಿ ಸದಸ್ಯರಾದ ಸದಾಶಿವ ಶರ್ಮ, ಈಶ್ವರ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಲಾಯಿತು.