ಹೊಸ ದಿಗಂತ ವರದಿ, ಕಾಸರಗೋಡು:
2020-21ನೇ ಶೈಕ್ಷಣಿಕ ವರ್ಷದ ಕೇರಳ ಎಸ್ಎಸ್ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯ ಶಿಕ್ಷಣ ಖಾತೆ ಸಚಿವ ಪ್ರೊ.ಸಿ.ರವೀಂದ್ರನಾಥ್ ತಿರುವನಂತಪುರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕಟಗೊಳ್ಳುವ ಊಹಾಪೋಹ ವರದಿಗಳಿಗೆ ತಲೆಕೆಡಿಸುವ ಅಗತ್ಯವಿಲ್ಲ ಎಂದು ಅವರು ನುಡಿದರು.
ಮಾರ್ಚ್ 31ರಂದೇ ಈ ಬಾರಿಯ ವಿದ್ಯಾಭ್ಯಾಸ ವರ್ಷ ಪೂರ್ತಿಗೊಳ್ಳಲಿದೆ. ಮಾರ್ಚ್ 17ರಿಂದ 30ರ ವರೆಗೆ ಎಸ್ಎಸ್ಎಲ್ ಸಿ ಹಾಗೂ ಪ್ಲಸ್ ಟು ತರಗತಿಗಳ ಪರೀಕ್ಷೆಗಳು ನಡೆಯಲಿವೆ ಎಂದರು. ಸಿಲೆಬಸ್ ಕಡಿತಗೊಳಿಸಿದರೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಚಿವರು ಇದೇ ವೇಳೆ ಹೇಳಿದರು.
ರಾಜ್ಯದ ಹೊಸ ಪಬ್ಲಿಕ್ ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚು ಪ್ರಶ್ನೆಗಳನ್ನು ನಿಗದಿಗೊಳಿಸಲಾಗಿದೆ. ಮಕ್ಕಳಿಗೆ ಆಸಕ್ತಿಯಂತೆ ಎಷ್ಟು ಪ್ರಶ್ನೆಗಳಿಗೆ ಬೇಕಾದರೂ ಉತ್ತರ ಬರೆಯಬಹುದಾಗಿದೆ. ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳುವ ಪ್ರಧಾನ ಭಾಗಗಳ ಸಿಲೆಬಸ್ ಮಕ್ಕಳಿಗೆ ಬೋಧಿಸಿಯಾಗಿದೆ. ಆ ಭಾಗದಿಂದಲೇ ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್ ಮಾನದಂಡಗಳನ್ನು ಕಡ್ದಾಯವಾಗಿ ಪಾಲಿಸಿಕೊಂಡು ಈ ಬಾರಿ ಎಸ್ಎಸ್ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳು ನಡೆಯಲಿವೆ. ಅಧ್ಯಾಪಕರು ಈ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕಾಗಿದೆ. ಮಕ್ಕಳು ಕೂಡ ತಮ್ಮ ಕರ್ತವ್ಯ ಮರೆಯುವ ಹಾಗಿಲ್ಲ. ರಾಜ್ಯದಲ್ಲಿ ಮಹಾಮಾರಿ ಕೊರೋನಾದ ಸಮಸ್ಯೆ ಬಹಳಷ್ಟಿದ್ದರೂ ಎಲ್ಲ ತರಗತಿಗಳ ಮಕ್ಕಳಿಗೂ ಸಾಧ್ಯವಿರುವಷ್ಟು ಪಾಠ ಪ್ರವಚನಗಳನ್ನು ಪೂರ್ತಿಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವರು ವಿವರಣೆ ನೀಡಿದರು.