ಕೇರಳ: ಕೊರೋನಾ ಪಾಸಿಟಿವ್ ಇರುವ ವರದಿಯನ್ನು ಗೌಪ್ಯವಾಗಿರಿಸಿ ಮೂವರು ಅನಿವಾಸಿ ಭಾರತೀಯರು ಭಾನುವಾರ ವಿಮಾನದಲ್ಲಿ ಕೇರಳ ತಲುಪಿದ್ದು ಇದೀಗ ಅವರ ಮೇಲೆ ಕೇರಳ ಸರ್ಕಾರ ಪ್ರಕರಣ ದಾಖಲಿಸಿದೆ.
ತಮಗೆ ಕೊರೋನಾ ದೃಢಪಟ್ಟಿದ್ದರೂ ಗೌಪ್ಯವಾಗಿ ಪ್ರಯಾಣ ಬೆಳೆಸಿದ್ದಲ್ಲದೆ ತಮ್ಮ ಮನೆಗಳಿಗೆ ನಿಯೋಜಿಸಿದ್ದ ಬಸ್ಸುಗಳಲ್ಲಿಯೂ ಅವರು ಪ್ರಯಾಣಿಸಿದ್ದಾರೆ.
ಮೂವರು ಕೊರೋನಾ ಸೋಂಕಿತರು ಕೊಲ್ಲಂ ಜಿಲ್ಲೆಯವರಾಗಿದ್ದು ಅಬುಧಾಬಿ ಯಿಂದ ಭಾನುವಾರ ವಿಮಾನದಲ್ಲಿ ಆಗಮಿಸಿದ್ದರು. ಅಲ್ಲದೇ ವಿಮಾನದಲ್ಲಿ ತಮಗೆ ಕೊರೋನಾ ಸೋಂಕಿರುವ ವಿಚಾರವನ್ನು ಅಧಿಕಾರಿಗಳನ್ನು ಸುಳ್ಳು ಹೇಳಿ ಮೋಸ ಮಾಡುವ ಕುರಿತು ಚರ್ಚೆ ನಡೆಸಿದ್ದು ಇದನ್ನು ಕೇಳಿದ್ದ ಸಹ ಪ್ರಯಾಣಿಕ ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಕೇರಳ ಸರ್ಕಾರ ಈ ಮೂವರ ಮೇಲೆ ಪ್ರಕರಣ ದಾಖಲಿಸಿದ್ದು ಪೊಲೀಸ್ ವಿಚಾರಣೆ ವೇಳೆ ಮೂವರು ಸೋಂಕಿತರು ಅಬುದಾಬಿಯಲ್ಲಿ ತಮ್ಮ ಗಂಟಲು ಮಾದರಿ ಪರೀಕ್ಷೆ ಪಾಸಿಟಿವ್ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಪಾಸಿಟಿವ್ ರಿಪೋರ್ಟ್ ಹಾಗೂ ರೋಗದ ಲಕ್ಷಣ ಇದ್ದರೂ ಅವರು ಹೇಗೆ ವಿಮಾನ ಏರಲು ಸಾಧ್ಯವಾಯಿತು ಎಂಬುದು ಗಂಭೀರ ವಿಚಾರವಾಗಿದೆ.
ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೋನಾ ಪರೀಕ್ಷೆ ನಡೆಸಬೇಕು ಎಂದು ನಾವು ಕೋರಿಕೊಂಡಿದ್ದೆವು. ಕೆಲವರ ಬೇಜವಬ್ದಾರಿ ವರ್ತನೆ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಲು ಕಾರಣವಾಗಿದೆ ಎಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ.