Wednesday, July 6, 2022

Latest Posts

ಕೇರಳ ಗಡಿ ಬಂದ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣ: ಸಂಸದ ನಳಿನ್ ಕುಮಾರ್ ಕಟೀಲು

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ರಾಜ್ಯದ ಇತರ ಜಿಲ್ಲೆಗಳ ಗಡಿ ಪ್ರದೇಶ ಮತ್ತು ಜಿಲ್ಲೆಯನ್ನು ಸಂಪರ್ಕಿಸುವ ಕೇರಳ ರಾಜ್ಯದ ಗಡಿಗಳನ್ನು ಬಂದ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಕಾಸರಗೋಡಿನಿಂದ ಆಗಮಿಸುವ ರೋಗಿಗಳಿಗೆ ಸುಪ್ರಿಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ನೀಡಿರುವ ಷರತ್ತಿನಂತೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಗಡಿ ಪ್ರದೇಶ ತಲಪಾಡಿಯಲ್ಲಿ ಜಿಲ್ಲೆಯ ಪೊಲೀಸರು ಮತ್ತು ಆರೋಗ್ಯ ಇಲಾಖೆ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.
ಕಾಸರಗೋಡು -ಮಂಗಳೂರು ನಡುವಿನ ಅಂತರಾಜ್ಯ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳನ್ನು ತಪಾಸಣೆ ನಡೆಸುವ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ 21 ಗಡಿ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದ ಗಡಿ ಭಾಗ ತಲಪಾಡಿ ಆಗಿದೆ. ಮುಖ್ಯವಾಗಿ ನೆರೆಯ ಕಾಸರಗೋಡಿನಲ್ಲಿ ಕೊರೊನ ಬಾಧಿತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳಿಂದ ಮಂಗಳೂರಿನ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಡಲು ಕಠಿಣ ಕ್ರಮ ಕೈಗೊಂಡಿದ್ದರಿಂದ ಮಂಗಳೂರು ಕೊರೋನಾ ಬಾಧಿತರ ಸಂಖ್ಯೆ ಇಳಿಮುಖವಾಗಲು ಸಾಧ್ಯವಾಗಿದೆ. ಈಗಾಗಲೇ ೧೨ ಸೋಂಕಿತರಲ್ಲಿ ೭ ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಯಾವುದೇ ಸೋಂಕಿತರು ದಾಖಲಾಗಿಲ್ಲ ಎಂದರು.
ಮಾನವೀಯ ನೆಲೆಯಲ್ಲಿ ಕಾಸರಗೋಡಿಗೆ ಅಗತ್ಯ ವಸ್ತುಗಳ ಗೂಡ್ಸ್ ವಾಹನಗಳಿಗೆ ಮತ್ತು ತುರ್ತು ವಾಹನಗಳಿಗೆ ಅವಕಾಶ ನೀಡಿದ್ದು, ತುರ್ತು ಅವಶ್ಯಕತೆಯಿರುವ ಕೊರೋನಾ ಹೊರತುಪಡಿಸಿದ ರೋಗಿಗಳಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ,ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ
ಸುರೇಶ್ ಆಳ್ವ ಸಾಂತ್ಯಗುತ್ತು, ಕ್ಷೇತ್ರ ಪ್ರ.ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿ, ಕಾರ್ಯದರ್ಶಿ ನವೀನ್ ಶೆಟ್ಟಿ ಕುರ್ನಾಡು, ಶಾನು ತಲಪಾಡಿ, ಎಸಿಪಿ ಕೋದಂಡರಾಮ, ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss