Monday, August 8, 2022

Latest Posts

ಕೇರಳ ತುಳು ಭವನ ಸೆ.18 ರಂದು ಲೋಕಾರ್ಪಣೆ: ಸಂಸ್ಕೃತಿ ಖಾತೆ ಸಚಿವ ಎ.ಕೆ.ಬಾಲನ್ ರಿಂದ ಉದ್ಘಾಟನೆ

ಕಾಸರಗೋಡು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮಹದುದ್ದೇಶದೊಂದಿಗೆ ಮಂಜೇಶ್ವರ ತಾಲೂಕಿನ ಹೊಸಂಗಡಿ ಬಳಿಯ ಕಡಂಬಾರು ಗ್ರಾಮದ ದುರ್ಗಿಪಳ್ಳದಲ್ಲಿ ನಿರ್ಮಾಣಗೊಂಡಿರುವ ಕೇರಳ ತುಳು ಅಕಾಡೆಮಿ (ಭವನ) ಸೆ.18 ರಂದು ಲೋಕಾರ್ಪಣೆಗೊಳ್ಳಲಿದೆ.

ರಾಜ್ಯ ಸಂಸ್ಕೃತಿ ಖಾತೆ ಸಚಿವ ಎ.ಕೆ.ಬಾಲನ್ ಅವರು ಸೆ.18 ರಂದು ಸಂಜೆ 4 ಗಂಟೆಗೆ ಆನ್ ಲೈನ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಂದಾಯ ಮತ್ತು ವಸತಿ ಇಲಾಖೆ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಬ್ಲಾಕ್ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಭಾಗವಹಿಸುವರು.

ಕೇರಳ ತುಳು ಅಕಾಡೆಮಿ ಸ್ಥಾಪಕ ಅಧ್ಯಕ್ಷರಾಗಿದ್ದ ಡಾ.ವೆಂಕಟರಾಜ ಪುಣಿಂಚತ್ತಾಯ ಅವರ ಹೆಸರಿನ ಗ್ರಂಥಾಲಯ ಇದೇ ವೇಳೆ ಉದ್ಘಾಟನೆಗೊಳ್ಳಲಿದೆ.

ಅಲ್ಲದೆ ಆನ್‌ ಲೈನ್ ತುಳು ಲಿಪಿ ಕಲಿಕೆ ಪ್ರಾರಂಭವಾಗಲಿದ್ದು ಇದು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಸಾರ್ವಜನಿಕರಿಗೆ ಸಹಕಾರಿಯಾಗಲಿದೆ. ತುಳು ತ್ರೈಮಾಸ ಪತ್ರಿಕೆ ತೆಂಬೆರೆಯ ವಿಶೇಷ ಸಂಚಿಕೆ ಕೂಡ ಬಿಡುಗಡೆಗೊಳ್ಳಲಿದೆ. ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss