ಹೊಸ ದಿಗಂತ ವರದಿ ಕಾಸರಗೋಡು
ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ ಪ್ರವೇಶ ನೀಡಲು ನಿರ್ಧರಿಸಲಾಗಿದೆ.
ಅದರಂತೆ ಶ್ರೇಯಾಂಕ ಪಟ್ಟಿಯನ್ನು www.hscap.kerala.gov.in ನಲ್ಲಿ ನ.30 ರಂದು ಬೆಳಗ್ಗೆ 9 ಗಂಟೆಗೆ ಪ್ರಕಟಿಸಲಾಗುವುದು.ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ನಡುವೆ ಶಾಲೆಯಲ್ಲಿ ಹಾಜರಾಗಬೇಕು. ಅಲ್ಲಿ ಶಾಲೆ / ಕೋರ್ಸ್ ಮತ್ತು ರಾಂಕ್ ಪಟ್ಟಿಯನ್ನು ಗಮನಿಸಿ ತಮ್ಮ ಹೆತ್ತವರೊಂದಿಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ.
ಎರಡು ಪುಟಗಳ ವಿದ್ಯಾರ್ಥಿಗಳ ರಾಂಕ್ ವರದಿ (ಪ್ರಿಂಟ್ ಔಟ್ ತೆಗೆಯಲು ಸಾಧ್ಯವಾಗದವರಿಗೆ ಶಾಲಾ ಅಧಿಕಾರಿಗಳು ನೆರವು ನೀಡುತ್ತಾರೆ), ಅರ್ಹತಾ ಪ್ರಮಾಣಪತ್ರ , ವಿನಾಯಿತಿ ಪ್ರಮಾಣಪತ್ರ , ತರಗತಿ ಪ್ರಮಾಣಪತ್ರ ಮತ್ತು ಅರ್ಜಿಯಲ್ಲಿ ಸೇರಿಸಿದ್ದರೆ ಮೂಲ ದಾಖಲೆಗಳು ಹಾಗೂ ಶುಲ್ಕ ಯಾವುದಾದರೂ ಇದ್ದರೆ ಸಲ್ಲಿಸಬೇಕು.
ವಿದ್ಯಾರ್ಥಿಗಳ ಅರ್ಹತೆ ಮತ್ತು ಮಾನದಂಡಗಳನ್ನು ಶ್ರೇಣಿಯ ಪಟ್ಟಿಯ ಸಹಾಯದಿಂದ ದೃಢೀಕರಿಸಲಾಗುವುದು ಮತ್ತು ಆಯಾ ಪ್ರಾಂಶುಪಾಲರ ಮೂಲಕ ಖಾಲಿ ಇರುವ ಸ್ಥಾನಗಳಿಗೆ ನ.30 ರಂದು ಮಧ್ಯಾಹ್ನ 12 ಗಂಟೆಯ ನಂತರ ಪ್ರವೇಶಾತಿ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಇಲಾಖೆಯು ತಿಳಿಸಿದೆ.