ಹೊಸದಿಗಂತ ವರದಿ, ಕೊಡಗು
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಭತ್ತ ಮತ್ತು ಕಾಫಿ ಬೆಳೆ ನೆಲಕಚ್ಚಿದ್ದು, ರೈತರ ಹಾಗೂ ಬೆಳೆಗಾರರ ಸಂಕಷ್ಟದ ಬಗ್ಗೆ ಜಿಲ್ಲಾಡಳಿತ ತಕ್ಷಣ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿರುವ ಕೊಡಗು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ, ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಆರ್ಥಿಕ ಪ್ಯಾಕೇಜನ್ನು ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸಮಿತಿಯ ಅಧ್ಯಕ್ಷ ಎ.ಎಸ್.ಕಟ್ಟಿಮಂದಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಪ್ರಮುಖರು, ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ, ನಷ್ಟಗಳನ್ನು ವಿವರಿಸಿದರು.
ಭತ್ತ ಬೆಳೆದ ರೈತರು ಕಾರ್ಮಿಕರಿಗೆ ದುಬಾರಿ ವೇತನ ನೀಡಿ ಫಸಲು ಕಟಾವು ಮಾಡಿಸಿದ್ದರು. ದಿಢೀರನೆ ಸುರಿದ ಧಾರಾಕಾರ ಮಳೆಯಿಂದಾಗಿ ಭತ್ತ ಮೊಳಕೆಯೊಡೆದಿದೆ, ಅಲ್ಲದೆ ಹುಲ್ಲು ಕೊಳೆತು ಹೋಗಿದೆ. ಕಾಫಿ ಕುಯ್ಲು ಕಾರ್ಯವನ್ನು ಬೇರೆ ರಾಜ್ಯಗಳ ಕಾರ್ಮಿಕರ ಮೂಲಕ ಮಾಡಿಸಲಾಗಿದ್ದು, ನಿರ್ವಹಣಾ ವೆಚ್ಚ ದುಬಾರಿಯಾಗಿದೆ. ಆದರೆ ಇಷ್ಟೆಲ್ಲಾ ಕಷ್ಟಪಟ್ಟರೂ ಅಕಾಲಿಕ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಫಿ ಫಸಲನ್ನು ಒಣಗಿಸಲು ಅಸಾಧ್ಯವಾಗಿದೆ. ಹವಾಗುಣದ ವೈಪರೀತ್ಯದಿಂದ ಕಾಫಿಯ ಗುಣಮಟ್ಟವನ್ನು ಕೂಡ ಕಾಯ್ದುಕೊಳ್ಳಲಾಗದೆ ಬೆಳೆಗಾರರು ಹಾಗೂ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಕೇರಳ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಧಾವಿಸಿದ್ದು, ಒಣ ಕಾಫಿಯ ಬೆಲೆ ಚೀಲವೊಂದಕ್ಕೆ ರೂ.4,500 ನ್ನು ನಿಗದಿ ಮಾಡಿದೆ. ಇದೇ ಕ್ರಮವನ್ನು ಕರ್ನಾಟಕ ಸರ್ಕಾರ ಕೂಡ ಅನುಸರಿಸಿದರೆ ಲಕ್ಷಾಂತರ ಬೆಳೆಗಾರರಿಗೆ ವರದಾನವಾಗಲಿದೆ. ಅಲ್ಲದೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ನವೆಂಬರ್ ತಿಂಗಳಿನಲ್ಲಿ ಕೊಡಗಿನಲ್ಲಿ ನಡೆದ ಪೌತಿ ಖಾತೆ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಹಾಗೂ ಬೆಳಗಾರರು ಪಾಲ್ಗೊಂಡು ಅರ್ಜಿ ವಿಲೇವಾರಿಯ ಬಗ್ಗೆ ಅಪಾರ ನಿರೀಕ್ಷೆಗಳನ್ನಿಕೊಂಡಿದ್ದರು. ಆದರೆ ಈ ಆಂದೋಲನ ನಡೆದು ತಿಂಗಳು ಎರಡಾದರೂ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಆರಂಭವಾಗದೇ ಇರುವ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಲಭಿಸಿದೆ ಎಂದು ತಿಳಿಸಿದ ಕಟ್ಟಿಮಂದಯ್ಯ, ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದೇ ಸಂದರ್ಭ ಒತ್ತಾಯಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಎಸ್.ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಎ.ಎಸ್.ಸತೀಶ್ ದೇವಯ್ಯ, ಸಲಹೆಗಾರ ಸಿ.ಎನ್.ವಿಶ್ವನಾಥ್, ನಿರ್ದೇಶಕ ಎ.ಎಸ್.ನಂಜಪ್ಪ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.