Monday, July 4, 2022

Latest Posts

ಕೇರಳ ರಾಜ್ಯದ ಚೀನಾ ಮುಕ್ಕು ಪ್ರದೇಶದ ಹೆಸರು ಬದಲಾವಣೆಗೆ ಗ್ರಾಮಸ್ಥರ ಪ್ರಬಲ ಪಟ್ಟು

ತಿರುವನಂತಪುರ: ಚೀನಾ – ಭಾರತದ ನಡುವೆ ಗಲ್ವಾನ್ ಕಣಿವೆಯಲ್ಲಿ ಯುದ್ಧದಂತಹ ಸನ್ನಿವೇಶ ನಿರ್ಮಾಣವಾಗಿರುವುದರ
ಬೆನ್ನಲ್ಲೇ ಕೇರಳ ರಾಜ್ಯದ ಗ್ರಾಮವೊಂದರ ಚೀನಾ ಮುಕ್ಕು ಎಂಬ ಪ್ರದೇಶದ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪ್ರಬಲ ಪಟ್ಟು ಹಿಡಿದಿದ್ದಾರೆ.
ಈ ಗ್ರಾಮದಲ್ಲಿರುವ ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂಬ ಹೆಸರನ್ನು ನೀಡಿದ್ದು ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರು. 1952 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಕೇರಳದ ಈ ಗ್ರಾಮಕ್ಕೆ ಭೇಟಿ ನೀಡಿದ್ದ ನೆಹರೂ ಅವರಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಮ್ಯೂನಿಸ್ಟರ ಕೆಂಪು ಬಣ್ಣದ ಧ್ವಜಗಳೇ ಕಣ್ಣಿಗೆ ಕಂಡವು. ಆದ್ದರಿಂದ ಈ ಪ್ರದೇಶವನ್ನು ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂದು ಅವರು ಕರೆದಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಹೆಸರು ಈ ಪ್ರದೇಶಕ್ಕೆ ಅಂಟಿಕೊಂಡಿದೆ. ಈಗ ಚೀನಾದೊಂದಿಗಿನ ಘರ್ಷಣೆಯ ಬೆನ್ನಲ್ಲೇ ಕೇರಳದ ಗ್ರಾಮಸ್ಥರು ಈ ಹೆಸರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಹೆಸರು ಬದಲಾವಣೆ ಸಂಬಂಧ ನಿರ್ಣಯ ಮಂಡಿಸಿದ್ದೇವೆ, ಇದಕ್ಕಾಗಿ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತ – ಚೀನಾ ಗಡಿ ಪ್ರದೇಶದಲ್ಲಿ ಯುದ್ಧದ ರೀತಿಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯೋಧರ ಬಲಿದಾನವನ್ನು ಗೌರವಿಸಿ ಹೆಸರು ಬದಲಾವಣೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪಂಚಾಯತ್ ಅಧ್ಯಕ್ಷೆ ಎಂ.ರಜನಿ ಮಾತನಾಡಿ, ಶೀಘ್ರದಲ್ಲೇ ನಡೆಯಲಿರುವ ಪಂಚಾಯತ್ ನ ಆಡಳಿತ ಸಮಿತಿ ಸಭೆಯಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಇನ್ನೊಮ್ಮೆ ನಿರ್ಣಯ ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss