Wednesday, August 10, 2022

Latest Posts

ಕೇರಳ ರಾಜ್ಯ ಮುಂಗಡಪತ್ರ ಮಂಡನೆ: ಶಬರಿಮಲೆ ವಿಮಾನ ನಿಲ್ದಾಣ ಸ್ಥಾಪನೆಗೆ ಹಣ ಮಂಜೂರು 

ಹೊಸ ದಿಗಂತ ವರದಿ, ತಿರುವನಂತಪುರ:

ಕೇರಳ ರಾಜ್ಯ ಸರಕಾರದ 2021-22ನೇ ಆರ್ಥಿಕ ವರ್ಷದ ಮುಂಗಡಪತ್ರವನ್ನು ಹಣಕಾಸು ಖಾತೆ ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜ್ಯದಲ್ಲಿ ಉತ್ಪನ್ನಗಳಿಗೆ ಏರ್ಪಡಿಸಿದ ಶೇಕಡಾ ಒಂದರಷ್ಟು ಪ್ರಳಯ ಸೆಸ್‌ನ ಕಾಲಾವಧಿ ಜುಲೈ ತಿಂಗಳಿಗೆ ಕೊನೆಗೊಳ್ಳಲಿದೆ. ಶಬರಿಮಲೆ ವಿಮಾನ ನಿಲ್ದಾಣ, ಇಡುಕ್ಕಿ ಮತ್ತು ವಯನಾಡು ಏಯರ್‌ಸ್ಟ್ರಿಪ್‌ಗಳಿಗಾಗಿ 9 ಕೋಟಿ ರೂ. ಮೀಸಲಿರಿಸಲಾಗಿದೆ. ಸಿಲ್ವರ್ ಲೈನ್ ರೈಲು ಯೋಜನೆಯ ಪರಿಸರ ಸಚಿವಾಲಯದ ಅನುಮತಿ ಪಡೆದು ಭೂಮಿ ಖರೀದಿಸುವ ಕಾರ್ಯ ನಡೆಸಲಾಗುವುದು. ಶಬರಿಪಾದ ನಿರ್ಮಾಣ ಯೋಜನೆಯ ವೆಚ್ಚದ ಅರ್ಧದಷ್ಟು ಕಿಫ್‌ಬಿ ವಹಿಸಲಿದೆ.
ವೃದ್ಧಾಪ್ಯ ಮೊದಲಾದ ಕಲ್ಯಾಣ ಪಿಂಚಣಿಯನ್ನು 1500 ರೂ. ನಿಂದ 1600 ರೂ. ಗೇರಿಸಲಾಗಿದೆ. ಇದನ್ನು ಏಪ್ರಿಲ್ ತಿಂಗಳಿನಿಂದಲೇ ಜ್ಯಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ತೆಂಗಿನಕಾಯಿ ಬೆಲೆಯನ್ನು 32 ರೂ. ಗೇರಿಸಲಾಗುವುದು. ರಾಜ್ಯದ 4530 ಕಿಲೋ ಮೀಟರ್ ರಸ್ತೆಗಳನ್ನು ಪುನರ್ ನಿರ್ಮಾಣಗೊಳಿಸಲಾಗುವುದು. ಭತ್ತ ಖರೀದಿ ಬೆಲೆಯನ್ನು 28 ರೂ. ಗೇರಿಸಲಾಗುವುದು. ಅಲ್ಲದೆ ಆರೋಗ್ಯ ವಲಯದಲ್ಲಿ 4000 ಹೊಸ ಉದ್ಯೋಗವನ್ನು ಸೃಷ್ಟಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಿಗೆ 1000 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ನೆರವು ಒದಗಿಸಲಾಗುವುದು. ಎಂಟು ಲಕ್ಷದಷ್ಟು ಉದ್ಯೋಗ ಸೃಷ್ಟಿಸಲಾಗುವುದು. ಕಿಫ್‌ಬಿ ಮೂಲಕ 15,000 ಕೋಟಿ ರೂ. ಗಳ ಯೋಜನೆಗಳನ್ನು ಜ್ಯಾರಿಗೊಳಿಸಲಾಗುವುದು. ವಿದ್ಯಾವಂತರಿಗೆ ಉದ್ಯೋಗ ಕಾರ್ಯ ಯೋಜನೆ ಜ್ಯಾರಿಗೊಳಿಸಲಾಗುವುದು. ಐದು ವರ್ಷದೊಳಗಾಗಿ 20 ಲಕ್ಷ ಮಂದಿಗೆ ಉದ್ಯೋಗ ನೀಡಲಾಗುವುದು. ಮುಂದಿನ ವರ್ಷದಿಂದ ಡಿಜಿಟಲ್ ನೋಂದಾವಣೆ ಸಂಸ್ಥೆಗೆ ಚಾಲನೆ ನೀಡಲಾಗುವುದು. ಡಿಜಿಟಲ್ ಫ್ಲಾಟ್ ಫಾಂ ಮೂಲಕ 20 ಲಕ್ಷ ಮಂದಿಗೆ ಉದ್ಯೋಗ ನೀಡಲಾಗುವುದು. ಇದಕ್ಕಾಗಿ ಅಗತ್ಯದ ಕಂಪ್ಯೂಟರ್ ಖರೀದಿಸಲು ಸಾಲ ನೀಡಲಾಗುವುದು. ಈ ಸಾಲವನ್ನು 2 ವರ್ಷದೊಳಗಾಗಿ ಮರುಪಾವತಿಸಬೇಕು.
ರಬ್ಬರ್ ಬೆಂಬಲ ಬೆಲೆ 170 ರೂ. ಗೇರಿಸಲಾಗುವುದು. ಕೌಶಲ್ಯ ಯೋಜನೆ ಮೂಲಕ 50 ಲಕ್ಷ ಮಂದಿಗೆ ಸಹಾಯ ಒದಗಿಸಲಾಗುವುದು. ವೃತ್ತಿಪರರು ಮತ್ತು ತರಬೇತಿ ಪಡೆದವರಿಗೆ ಮಾಹಿತಿಗಳನ್ನು ಡಿಜಿಟಲ್ ಫ್ಲಾಟ್ ಫಾಂ ಮೂಲಕ ನೀಡಲಾಗುವುದು. ವಿಕೇಂದ್ರೀಕೃತ ರೀತಿಯಲ್ಲಿ ಉದ್ಯೋಗಗಳಲ್ಲಿ ಅಗತ್ಯದ ಸೌಕರ್ಯ ಏರ್ಪಡಿಸಲಾಗುವುದು. ಅರ್ಹ
ಎಲ್ಲಾ ಮನೆಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು. 20 ಸಾವಿರ ಮಕ್ಕಳಿಗೆ ಉನ್ನತ ಶಿಕ್ಷಣ ಸೌಕರ್ಯ ಏರ್ಪಡಿಸಲಾಗುವುದು.
ಪಡಿತರ ಅಂಗಡಿಗಳ ಮೂಲಕ ವಿತರಿಸುವ ಆಹಾರ ಕಿಟ್‌ಗಳ ಯೋಜನೆಯನ್ನು ಇನ್ನೂ ಮುಂದುವರಿಸಲಾಗುವುದು. ಈ ತನಕ 5.5 ಕೋಟಿ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. 50 ಲಕ್ಷ ಕುಟುಂಬಗಳಿಗೆ ತಲಾ 10 ಕಿಲೋದಂತೆ ಅಕ್ಕಿ ವಿತರಿಸಲಾಗುವುದು. ಇದರಂತೆ ನೀಲಿ ಮತ್ತು ಬಿಳಿ ಪಡಿತರ ಕಾರ್ಡ್ ದಾರರಿಗೆ ಕಿಲೋವೊಂದಕ್ಕೆ 15 ರೂ. ದರದಲ್ಲಿ 10 ಕಿಲೋ ಅಕ್ಕಿ ವಿತರಿಸಲಾಗುವುದು.
ಅನಿವಾಸಿ ಕೇರಳೀಯರ ನಿಧಿಗೆ 9 ಕೋಟಿ ರೂ. ಮೀಸಲಿರಿಸಲಾಗುವುದು. ವಿದೇಶದಿಂದ ಕೆಲಸ ನಷ್ಟಗೊಂಡು ಹಿಂತಿರುಗುವವರಿಗಿರುವ ಕಲ್ಯಾಣ ನಿಧಿಯ ಕಂತನ್ನು 350 ರೂ. ಹಾಗೂ ಅವರ ಪಿಂಚಣಿಯನ್ನು 3500 ರೂ. ಗೇರಿಸಲಾಗುವುದು. ಇದೇ ರೀತಿ ಇತರ ರಾಜ್ಯಗಳಿಂದ ಊರಿಗೆ ಹಿಂತಿರುಗುವವರ ಕಲ್ಯಾಣ ನಿಧಿ ಕಂತನ್ನು 200 ರೂ. ಗೇರಿಸಲಾಗುವುದಲ್ಲದೆ ಅವರ ಪಿಂಚಣಿಯನ್ನು 3000 ರೂ. ಗೇರಿಸಲಾಗುವುದು.
ಅಯ್ಯಂಗಾಳಿ ಉದ್ಯೋಗ ಖಾತರಿ ಯೋಜನೆಗಾಗಿ 100 ಕೋಟಿ ರೂ. ಮೀಸಲಿರಿಸಲಾಗುವುದು. ಉನ್ನತ ಶಿಕ್ಷಣ ರಂಗದಲ್ಲಿ ಈ ವರ್ಷ 20,000 ಮಂದಿಗೆ ಹೆಚ್ಚುವರಿ ಅಧ್ಯಯನ ಸೌಕರ್ಯ ಏರ್ಪಡಿಸಲಾಗುವುದು. ಹೊಸದಾಗಿ 2500 ಸ್ಮಾರ್ಟ್ ಆ್ಯಪ್‌ಗಳನ್ನು ಆರಂಭಿಸಲಾಗುವುದು. 50 ಸಾವಿರ ಕೋಟಿ ರೂ. ಬಂಡವಾಳದ ಬೃಹತ್ ಉದ್ದಿಮೆ ಯೋಜನೆಯನ್ನು ಈ ವರ್ಷ ಅರಂಭಿಸಲಾಗುವುದು.
ವಿಕಲಚೇತನರ ಕಲ್ಯಾಣಕ್ಕಾಗಿ 600 ಕೋಟಿ ರೂ. ವಿನಿಯೋಗಿಸಲಾಗುವುದು. ಬಡವರ ಮನೆಯ ವಿಕಲಚೇತನರಿಗೆ ವಿಶೇಷ ಧನ ಸಹಾಯ ಒದಗಿಸಲಾಗುವುದು. ಮೇಲ್ಜಾತಿ ವಿಭಾಗದವರ ಕಲ್ಯಾಣಕ್ಕಾಗಿ 35 ಕೋಟಿ ರೂ. ಮೀಸಲಿರಿಸಲಾಗುವುದು. ಕೃಷಿ ವಲಯದಲ್ಲಿ 2 ಲಕ್ಷ ಮಂದಿಗೆ ಕೆಲಸ ಖಾತರಿಪಡಿಸಲಾಗುವುದು. ಕೃಷಿಯೇತರ ವಲಯದಲ್ಲಿ ಮೂರು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಭತ್ತ ಕೃಷಿಗೆ 116 ಮತ್ತು ತೆಂಗು ಕೃಷಿಗೆ 75 ಲಕ್ಷ ರೂ. ಮೀಸಲಿರಿಸಲಾಗುವುದು. ಲೈಫ್ ಮಿಶನ್ ಯೋಜನೆಯಲ್ಲಿ ಹೊಸದಾಗಿ ಒಂದೂವರೆ ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಬಜೆಟ್ ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss