Sunday, August 14, 2022

Latest Posts

ಕೇರಳ ಲೈಫ್ ಮಿಷನ್ ಯೋಜನೆಯಲ್ಲಿ ಭಾರೀ ಅವ್ಯವಹಾರ: ವಿಜಿಲೆನ್ಸ್ ತನಿಖೆ ಆರಂಭ

ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾದ ಲೈಫ್ ಮಿಷನ್ ಯೋಜನೆ (ನೂತನ ಮನೆ ನಿರ್ಮಾಣ ಯೋಜನೆ)ಯಲ್ಲಿ ನಡೆದ ವಂಚನೆ, ಅವ್ಯವಹಾರಗಳ ಕುರಿತು ರಾಜ್ಯ ಸರಕಾರವು ವಿಜಿಲೆನ್ಸ್ ತನಿಖೆಗೆ ಆದೇಶಿಸಿದ್ದು , ಅದರಂತೆ ಸಮಗ್ರ ತನಿಖೆ ಆರಂಭಗೊಂಡಿದೆ.
ಈ ಬಗ್ಗೆ ವಿಜಿಲೆನ್ಸ್ ಡೈರೆಕ್ಟರ್ ಗೆ ಗೃಹ ಇಲಾಖೆಯ ಕಾರ್ಯದರ್ಶಿ ಪತ್ರ ಕಳುಹಿಸಿದ್ದರು. ಎಡರಂಗ ಸರಕಾರದ ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿ ಮೊದಲ ತನಿಖೆ ಇದಾಗಿದೆ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿದಂತೆ ಭಾರೀ ವಿವಾದ ಸೃಷ್ಟಿಯಾಗಿ ಒಂದೂವರೆ ತಿಂಗಳು ಕಳೆದ ಬಳಿಕ ಆರೋಪಗಳ ಕುರಿತು ವಿಜಲೆನ್ಸ್ ತನಿಖೆಗೆ ತೀರ್ಮಾನಿಸಲಾಗಿದೆ.
ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಅಡಿಯಲ್ಲಿ ನಾಲ್ಕೂ ಕಾಲು ಕೋಟಿ ರೂಪಾಯಿ ಕಮಿಷನ್ ಲಪಟಾಯಿಸಿರುವುದು ಸೇರಿದಂತೆ ವಿವಿಧ ಅವ್ಯವಹಾರಗಳ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಲಿದೆ.
ವಡಕಾಂಚೇರಿಯ ಫ್ಲ್ಯಾಟ್ ನಿರ್ಮಾಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವ್ಯಾಪಕ ಆರೋಪ ಕೇಳಿಬಂದಿದೆ. ಈ ಯೋಜನೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಧ್ಯಮ ಸಲಹೆಗಾರ ಬಹಿರಂಗಪಡಿಸಿದ ನಾಲ್ಕೂ
ಕಾಲು ಕೋಟಿ ರೂಪಾಯಿಗಳ ವಂಚನೆಯನ್ನು ಹಣಕಾಸು ಖಾತೆ ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ದೃಢೀಕರಿಸಿದರು. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತನಿಖೆಗೆ ಒಪ್ಪಿಗೆ ನೀಡದೆ ಎಡರಂಗ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ.
ಯುಎಇ ರೆಡ್ ಕ್ರಸಂಟ್ ಪ್ರವಾಹ ಬಾಧಿತರಿಗೆ ವಸತಿ ನಿರ್ಮಾಣಕ್ಕಾಗಿ ನೀಡಿದ 20 ಕೋಟಿ ರೂಪಾಯಿಗಳಲ್ಲಿ ನಾಲ್ಕೂ ಕಾಲು ಕೋಟಿ ರೂಪಾಯಿ ಮೊತ್ತವನ್ನು ಚಿನ್ನ ಕಳ್ಳ ಸಾಗಾಟ ಪ್ರಕರಣದ ಆರೋಪಿ ಸ್ವಪ್ನಾ ಒಳಗೊಂಡ ತಂಡವು ಲಪಟಾಯಿಸಿದೆ ಎಂದು ದೂರಲಾಗಿದೆ. ಈ ಮಧ್ಯೆ ರಾಜ್ಯದ ಪ್ರಭಾವಿ ಸಚಿವರು ಹಾಗೂ ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಕೂಡ ಲೈಫ್ ಮಿಷನ್ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss