ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಪೂರ್ವಸಿದ್ಧತೆಯ ಅಂಗವಾಗಿ ಪಂಚಾಯತ್ ನ ಪ್ರತೀ ಮತಗಟ್ಟೆಗಳಲ್ಲಿ ಸರಾಸರಿ 1000 ಅಥವಾ ಅದಕ್ಕಿಂತ ಕೆಳಗೆ ಮತದಾರರು ಸಾಕೆಂದು ರಾಜ್ಯ ಚುನಾವಣಾ ಆಯೋಗವು ತೀರ್ಮಾನಿಸಿದೆ. ಕಾರ್ಪರೇಷನ್ ಮತ್ತು ನಗರಸಭೆಗಳಲ್ಲಿ 1500 ಮಂದಿ ಮತದಾರರು ಇರಬಹುದು. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದ್ದು , ಈ ಸಂದರ್ಭದಲ್ಲಿ ಪ್ರತೀ ಮತಗಟ್ಟೆಗಳಲ್ಲಿರುವ ಮತದಾರರ ಸಂಖ್ಯೆಯನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಲು ನಿರ್ಧರಿಸಲಾಗಿದೆ. ಆದರೆ ಮತಯಂತ್ರಗಳ ಅಭಾವದಿಂದಾಗಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸುವಲ್ಲಿ ಕೆಲವೊಂದು ಅಡ್ಡಿ ಆತಂಕ ಎದುರಾಗಲಿದೆ. ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಚುನಾವಣಾ ಆಯೋಗವು ನಡೆಸಿದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ಪ್ರತೀ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆಗೊಳಿಸಲು ಕೂಡ ವಿವಿಧ ಪಕ್ಷಗಳು ಅಭಿಪ್ರಾಯ ಮಂಡಿಸಿದ್ದವು.
ಪಂಚಾಯತ್ ವಾರ್ಡ್ ನ ಪ್ರತೀ ಮತಗಟ್ಟೆಯಲ್ಲಿ ಗ್ರಾಮ, ಬ್ಲಾಕ್, ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಿಗಾಗಿ ಮೂರು ಮತಯಂತ್ರಗಳು ಬೇಕಾಗುತ್ತವೆ. ಆದ್ದರಿಂದ ಮತಯಂತ್ರಗಳು ಕಡಿಮೆಯಾದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಪಡೆಯಲು ಯೋಜನೆ ರೂಪಿಸಲಾಗಿದೆ.
ಇದೇ ವೇಳೆ ಪ್ರತೀ ಮತಗಟ್ಟೆಗಳಲ್ಲಿ 1000 ಮತದಾರರನ್ನು ನಿಗದಿಪಡಿಸಿದರೆ ಮತ ಚಲಾಯಿಸಲು ಹೆಚ್ಚು ಸಮಯ ಬೇಕಾಗದು ಎಂದು ಚುನಾವಣಾ ಆಯೋಗವು ಅಂದಾಜಿಸಿದೆ. ಮತದಾನದ ಸಮಯವನ್ನು ಒಂದು ಗಂಟೆ ಏರಿಸಲಾಗುವುದು. ಕೇರಳದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪ್ರತೀ ಮತಗಟ್ಟೆಯಲ್ಲಿ ಮತದಾರರ ಸರಾಸರಿ ಸಂಖ್ಯೆ 1500 ಆಗಿರುತ್ತದೆ.