ಕಾಸರಗೋಡು: ಕರ್ನಾಟಕಕ್ಕೆ ಕೇರಳದಿಂದ ಹೋಗುವ ಎಲ್ಲ ಗಡಿಗಳನ್ನು ತೆರೆದು ಮುಕ್ತ ಅಂತಾರಾಜ್ಯ ಪ್ರಯಾಣಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಮುಕ್ತ ಸಂಚಾರಕ್ಕಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅದರ ಮೇಲಿನ ವಿಚಾರಣೆ ನಡೆಸಿ ಕೇರಳ ಹೈಕೋರ್ಟ್ ನ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಧ್ಯೆ ಎಲ್ಲ ಗಡಿಗಳು ಮುಚ್ಚಲ್ಪಟ್ಟಿದ್ದವು. ಅನ್ ಲಾಕ್-3ರ ನಂತರವೂ ಕೇರಳ ಸರಕಾರ ಹಾಗೂ ಕಾಸರಗೋಡು ಜಿಲ್ಲಾಡಳಿತ ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಅನುಮತಿ ಕೊಟ್ಟಿರಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಕೋವಿಡ್ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕರ್ನಾಟಕವು ಮೊದಲಿಗೆ ತನ್ನೆಲ್ಲ ಕೇರಳದ ಗಡಿಗಳನ್ನು ಮಣ್ಣು ಹಾಕಿ ಮುಚ್ಚಿತ್ತು. ಆದರೆ ಬಳಿಕ ಪಾಸ್ ಮೂಲಕ ಕಾಸರಗೋಡಿನವರು ಬರಲು ಅನುಮತಿ ನೀಡಿತ್ತು. ನಂತರ ಏಕಾಏಕಿ ಜುಲೈ 6 ರಿಂದ ಕಾಸರಗೋಡು ಜಿಲ್ಲಾಡಳಿತವು ಎಲ್ಲ ಪಾಸ್ ವ್ಯವಸ್ಥೆಗಳನ್ನು ನಿಲ್ಲಿಸಿತ್ತು. ಮಂಗಳೂರಿಗೆ ಹೋಗುವ ಉದ್ಯೋಗಿಗಳು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಸಾರ್ವಜನಿಕರು ಇದರಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಇದರಿಂದಾಗಿ ಕಾಸರಗೋಡು ಜಿಲ್ಲಾಡಳಿತದ ಈ ಜನವಿರೋಧಿ ನಿರ್ಧಾರವು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಕೇರಳ ಉಚ್ಚ ನ್ಯಾಯಾಲಯದ ಈ ಮಹತ್ವದ ಆದೇಶವು ಉಭಯ ರಾಜ್ಯಗಳ ಪ್ರಯಾಣಿಕರ ಮುಕ್ತ ಪ್ರಶಂಸೆಗೆ ಕಾರಣವಾಗಿದೆ.