ಹೊಸದಿಲ್ಲಿ : ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಒಂದೇ ಸವನೆ ಹೆಚ್ಚುತ್ತಿರುವ ಹಿನ್ನೆಲೆಯಿಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸಾ ಸೌಕರ್ಯಗಳನ್ನು ಕಲ್ಪಿಸುವ ಭಾರೀ ಒತ್ತಡ ಸರಕಾರದ ಹೆಗಲಿಗೆ ಬಿದ್ದಿದ್ದು, ಈ ನಡುವೆಯೇ ಭಾರತೀಯ ರೈಲ್ವೆಯು ಕೇವಲ ೧೦ದಿನಗಳಲ್ಲಿ ೨,೫೦೦ರೈಲು ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತಿಸುವ ಮೂಲಕ ೪೦ಸಾವಿರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಬಹುದಾದ ವ್ಯವಸ್ಥೆಯೊಂದನ್ನು ಸಜ್ಜುಗೊಳಿಸಿ ಅಚ್ಚರಿ ಸೃಷ್ಟಿಸಿದೆ.
ರೈಲ್ವೆ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ ೫,೦೦೦ ಕೋಚ್ ಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಯೋಜನೆ ಇದೆ. ಮಾನವ ಸಂಪನ್ಮೂಲ ಇಲ್ಲದೇ ಇರುವ ಸಂಕಷ್ಟದ ಸ್ಥಿತಿಯಲ್ಲೂ ರೈಲ್ವೆ ಇಲಾಖೆ ಅಸಾಧ್ಯವಾದ ಕೆಲಸವನ್ನು ಕೇವಲ ೧೦ ದಿನಗಳಲ್ಲಿ ಪೂರ್ಣಗೊಳಿಸಿದೆ. ೨,೫೦೦ ಬೋಗಿಗಳನ್ನು ವೈದ್ಯಕೀಯ ಮಾನದಂಡದ ಪ್ರಕಾರ ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಮೂಲಕ ೪೦,೦೦೦ ಐಸೊಲೇಷನ್ ಬೆಡ್ ಗಳನ್ನು ಸೃಷ್ಟಿಸಲಾಗಿದೆ. ಈಗ ಎಂತಹ ಸವಾಲಿನ ಪರಿಸ್ಥಿತಿ ಎದುರಿಸುವುದಕ್ಕೂ ಭಾರತ ಸಜ್ಜಾಗಿದೆ . ಇದೀಗ ದೇಶಾದ್ಯಂತ ೧೩೩ ಪ್ರದೇಶಗಳಲ್ಲಿ ದಿನವೊಂದಕ್ಕೆ ಸರಾಸರಿ ೩೭೫ ರೈಲು ಬೋಗಿಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.