Thursday, June 30, 2022

Latest Posts

ಕೈಕಮಾಂಡ್‌ಗೆ ಸಿದ್ದರಾಮಯ್ಯ ‘ಕಿವಿಮಾತು’: ಯಾವುದೇ ಹುದ್ದೆ ಕದಲಿದರೂ ಅಲ್ಲಾಡಲಿದೆ ಕಾಂಗ್ರೆಸ್ ಬುಡ !

ಬೆಂಗಳೂರು: ರಾಜೀನಾಮೆ ಕೊಟ್ಟಿದ್ದ ಸ್ಥಾನಗಳೆರಡನ್ನೂ ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ಸಿದ್ದರಾಮಯ್ಯ, ತಾವು ಅಲಂಕರಿಸಿರುವ ಯಾವುದೇ ಹುದ್ದೆ ಕದಲಿದರೂ ಪಕ್ಷದ ಬುಡ ಅಲ್ಲಾಡಲಿದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಈ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಧುಸೂದನ್ ಮಿಸ್ತ್ರಿ ನೇತೃತ್ವದ ತಂಡವು ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಸಭೆ ವಿರೋಧ ಪಕ್ಷದ ನಾಯಕ (ಓಎಲ್‌ಪಿ) ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ (ಸಿಎಲ್‌ಪಿ) ಸ್ಥಾನಗಳ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮಾದರಿ ಅನುಸರಿಸುವಂತೆ ಸಲಹೆ ನೀಡಿದ್ದ ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು, ಸಿಎಲ್‌ಪಿ ಅಥವಾ ಓಎಲ್‌ಪಿ ನಾಯಕತ್ವಗಳೆರಡರಲ್ಲಿ ಯಾವುದಾದರೊಂದು ಸ್ಥಾನವನ್ನು ಸಿದ್ದರಾಮಯ್ಯರಿಗೆ ನೀಡಿ, ಇನ್ನೊಂದನ್ನು ಬೇರೊಬ್ಬರಿಗೆ ಕೊಡುವಂತೆ ಸಲಹೆ ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕಮಾಂಡ್ ಮಹಾರಾಷ್ಟ್ರ ಮಾದರಿಯ ಸೂತ್ರವನ್ನು ಕರ್ನಾಟಕದಲ್ಲೂ ಅನುಸರಿಸಲು ಮುಂದಾಗಿತ್ತು. ಈ ವಿಚಾರವನ್ನು ಶನಿವಾರ ಬೆಂಗಳೂರಿಗೆ ಬಂದಿದ್ದ ಗುಲಾಂನಬಿ ಆಜಾದ್ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ರವಾನಿಸಿದೆ. ಇದನ್ನರಿತ ಸಿದ್ದರಾಮಯ್ಯ, ಹೈಕಮಾಂಡ್ ಚಿಂತನೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಇಂತಹ ಬದಲಾವಣೆಗೆ ಕೈ ಹಾಕಿದ್ದೇ ಆದರೆ, ತಮ್ಮ ದಾರಿ ತಾವು ನೋಡಿಕೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ಗೆ ಬಂದು ಸೇರಿಕೊಂಡ ಕೆಲವೇ ವರ್ಷದಲ್ಲಿ ಹಲವು ಹುದ್ದೆಗಳನ್ನು ಅನುಭವಿಸಿದ ಸಿದ್ದರಾಮಯ್ಯ, ಈಗಲೂ ಎರಡು ಹುದ್ದೆಗಳನ್ನು ಅನುಭವಿಸುವುದು ಸರಿಯಲ್ಲ ಎಂಬುದು ಮೂಲ ಕಾಂಗ್ರೆಸಿಗರ ವಾದ. ಇದಕ್ಕೆ ತದ್ವಿರುದ್ಧ ವಾದ ಮಂಡಿಸುವ ಸಿದ್ದರಾಮಯ್ಯ, ತಾವು ಸಿಎಂ ಇದ್ದಾಗ ಘೋಷಿಸಿದ ಕಾರ್ಯಕ್ರಮಗಳೇ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂಬ ಹಕ್ಕು ಸ್ಥಾಪಿಸುವ ಪ್ರಯತ್ನ ನಡೆಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಪಕ್ಷದೊಳಗಿನ ನಾಯಕತ್ವದ ಕೊರತೆಯನ್ನು ಕಂಡರಿತಿರುವ ಅವರು, ಎರಡೂ ಹುದ್ದೆಗಳನ್ನು ಬಿಟ್ಟುಕೊಡುವ ಯಾವ ಇರಾದೆಯನ್ನೂ ವ್ಯಕ್ತಪಡಿಸಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss