ಮಂಡ್ಯ: ನಮ್ಮಂತಹ ರಾಜಕಾರಣಿಗಳಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಾರು ಬರುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ನಡೆದ ಪಿಎಸ್ಎಸ್ಕೆಯ ಸಾಮಥ್ರ್ಯವನ್ನು 5 ಸಾವಿರ ಟಿಸಿಡಿಗೆ ವಿಸ್ತರಣೆ ಮಾಡುವ ಭೂಮಿಪೂಜೆ ಹಾಗೂ ಬಾಯ್ಲರ್ ಪ್ರದೀಪನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಎತ್ತಿ ಕಟ್ಟುತ್ತಿದ್ದೇವೆ. ಒಂದು ಕಾಲದಲ್ಲಿ ಮಂಡ್ಯ ಎಂದರೆ ಇಡೀ ಇಂಡಿಯಾದಲ್ಲೇ ಪ್ರಸಿದ್ಧಿಯಾಗಿತ್ತು. ಆದರೆ, ಇಂದು ಯಾವೊಬ್ಬ ಉದ್ಯಮಿಗಳು ಮಂಡ್ಯ ಜಿಲ್ಲೆಯಲ್ಲಿ ಉದ್ಯಮ ಮಾಡಲು ಭಯಪಡುತ್ತಿದ್ದಾರೆ. ಏಕೆ ಕೈಗಾರಿಕೆಗಳು ಬರಬಾರದು? ಇಲ್ಲಿಯ ಯುವಜನತೆಗೆ ಉದ್ಯಮ ಬೇಡವೇ? ಎಂದು ಪ್ರಶ್ನಿಸಿದರು.
ರೈತರೇ ನೀವು ಎಂದಿಗೂ ನಾನು ಸೇರಿದಂತೆ ರಾಜಕಾರಣಿಗಳನ್ನು ಎಂದಿಗೂ ನಂಬಬೇಡಿ, ಅವರಿಂದ ದೂರ ಇರಿ. ಪ್ರತಿಯೊಂದಕ್ಕೂ ಪ್ರತಿಭಟನೆ, ಮುಷ್ಕರವೇ ಪರಿಹಾರವಲ್ಲ. ಇದನ್ನು ಅರಿತು ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ನಮ್ಮಗಳ ರಾಜಕಾರಣದಿಂದಲೇ ಜಿಲ್ಲೆಯ ಹಲವು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ರಾಜಕಾರಣಿಗಳು ಕೈಗಾರಿಕೆಗಳ ಮೇಲೆ ಹಸ್ತಕ್ಷೇಪ ಮಾಡಬಾರದು. ರಾಜಕಾರಣಿಗಳು ರೈತರ ಉದ್ಧಾರ ಮಾಡುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ಎಲ್ಲ ವಿಚಾರದಲ್ಲೂ ರಾಜಕೀಯ ಮಾಡಬಾರದು ಎನ್ನುವ ಮೂಲಕ ಪರೋಕ್ಷವಾಗಿ ದಳಪತಿಗಳನ್ನು ಕುಟುಕಿದರು.