ಕೈದಿಗಳೇ ಸಿದ್ಧಪಡಿಸಿದ 17 ಸಾವಿರ ಮಾಸ್ಕ್

0
24

ಬೆಂಗಳೂರು: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ತಡೆಗಾಗಿ ಜಗತ್ತೇ ತಲೆಕೆಡಿಸಿಕೊಂಡು ಕುಳಿತಿದೆ. ಹಲವೆಡೆ ಮುಖಗವಸು (ಮಾಸ್ಕ್), ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಪರಿಕರಗಳ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಈ ಆತಂಕ ದೂರ ಮಾಡುವ ಸಲುವಾಗಿ ಜೈಲಿನಲ್ಲಿರುವ ಕೈದಿಗಳು ಶ್ರಮಿಸುತ್ತಿದ್ದು, 3 ಪದರ (ಲೇಯರ್) ವುಳ್ಳ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ. ಗೃಹ ಇಲಾಖೆಯ ಸಿಬ್ಬಂದಿಗಾಗಿ ತಲಾ 6 ರೂ.ಗಳಂತೆ ದಿನಂಪ್ರತಿ 5 ಸಾವಿರ ಮಾಸ್ಕ್ ಗಳನ್ನು ತಯಾರಿಸುತ್ತಿದ್ದು, ಈವರೆಗೆ 17 ಸಾವಿರ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಾರೆ. ಈ ಮಾಸ್ಕ್‌ಗಳನ್ನು ಬಂಧೀಖಾನೆ ಡಿಜಿಪಿ ಅಲೋಕ್ ಮೋಹನ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯ್ಮಿ, ಇಲಾಖೆಯಲ್ಲಿನ ಸಿಬ್ಬಂದಿ ಕೊರೋನಾ ಸೋಂಕಿತರು ಹಾಗೂ ಶಂಕತರ ರಕ್ಷಣೆ ಮಾಡುತ್ತಿದ್ದಾರೆ. ಅವರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಸಾರ್ವಜನಿಕ ಸಂಪರ್ಕದಲ್ಲಿರ ಬೇಕಾದ ಅನಿವಾರ್ಯತೆಯೂ ಸಿಬ್ಬಂದಿಗಿದೆ. ಹೀಗಾಗಿ ಅವರಿಗೆ ಮಾಸ್ಕ್ ಕೂಡ ಅಷ್ಟೇ ಅನಿವಾರ್ಯವಾಗಿದೆ ಎಂದರು.

ಒಟ್ಟಾರೆ 40-50 ಸಾವಿರ ಮಾಸ್ಕ್ ಗಳ ಅಗತ್ಯದ್ದು, ಸದ್ಯಕ್ಕೆ 17 ಸಾವಿರ ಮಾಸ್ಕ್ಗಳನ್ನು ಪೊಲೀಸರಿಗಾಗಿ ಕೈದಿಗಳು ತಯಾರಿಸಿ ಕೊಟ್ಟಿರುವುದು ವಿಶೇಷ. ಅಗತ್ಯರುವ ಮಾಸ್ಕ್ ಗಳನ್ನು ಬೇರೆಡೆಯಿಂದಲೂ ಪೊಲೀಸರಿಗೆ ಒದಗಿಸುವ ಕೆಲಸ ನಡೆಯುತ್ತಿದೆ. ಜೊತೆಗೆ ಕೈದಿಗಳು ಸಿದ್ಧಪಡಿಸಿ ಕೊಟ್ಟಿರುವ ಮಾಸ್ಕ್ ಗಳನ್ನೂ ಬಳಸಿಕೊಳ್ಳಲಾಗುತ್ತದೆ.

ಕೈದಿಗಳ ಮೇಲೂ ಪ್ರತ್ಯೇಕ ನಿಗಾ ವ್ಯವಸ್ಥೆ: ಕಾರಾಗೃಹಗಳಿಗೆ ಹೊಸದಾಗಿ ಬರುತ್ತಿರುವ ಕೈದಿಗಳನ್ನು ಕಡ್ಡಾಯವಾಗಿ ಥರ್ಮಲ್ ಪರೀಕ್ಷೆಗೊಳಪಡಿಸಿ, 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ ಇಡಲಾಗುತ್ತಿದೆ. ಅಲ್ಲದೆ, ಈಗಾಗಲೇ ಜೈಲಿನಲ್ಲಿರುವ ಕೈದಿಗಳ ಆರೋಗ್ಯದ ಮೇಲೂ ವೈದ್ಯರು ನಿಗಾ ಇಟ್ಟಿದ್ದಾರೆ.

ಆರೋಗ್ಯದಲ್ಲಿ ತೀವ್ರತರ ಏರುಪೇರು ಕಾಡುವಂತೆ ಅಂತಹ ಕೈದಿಗಳನ್ನು ತಕ್ಷಣವೇ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ತಮ್ಮನ್ನು ಸಂದರ್ಶನ ಅಥವಾ ಭೇಟಿ ಮಾಡಲು ಬಾರದಂತೆ ಸ್ವತಃ ಕೈದಿಗಳೇ ಕುಟುಂಬಸ್ಥರಿಗೆ ಮನವಿ ಮಾಡುತ್ತಿದ್ದಾರೆ. ಈ ವಿಚಾರವನ್ನು ಬಂಧೀಖಾನೆ ಸಿಬ್ಬಂದಿಯೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕಾರಾಗೃಹದಲ್ಲೂ ಅಂತರ ಕಾಯ್ದುಕೊಳ್ಳುವ ವಿಚಾರವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಪಪಡಿಸಿದರು.

LEAVE A REPLY

Please enter your comment!
Please enter your name here