ಹೊಸದಿಗಂತ ಆನ್ ಲೈನ್ ಡೆಸ್ಕ್:
ನೂತನ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಮತ್ತೆ ಪ್ರಧಾನಿ ರೈತರ ಉದ್ದೇಶಿಸಿ ಮಾತನಾಡಿದ್ದಾರೆ. ಇಂದು ಮಧ್ಯ ಪ್ರದೇಶದ ರೈಸನ್ ನಲ್ಲಿ ನಡೆದ ‘ಕಿಸಾನ್ ಕಲ್ಯಾಣ್’ ರೈತ ಸಮಾವೇಶವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು,ಇದು ರಾತ್ರೋರಾತ್ರಿ ತಂದ ಕಾನೂನಲ್ಲ, ಕಳೆದ 20-30 ವರ್ಷಗಳಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಸುಧಾರಣೆಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿವೆ. ಕೃಷಿ ತಜ್ಞರು, ಅರ್ಥಶಾಸ್ತ್ರಜ್ಞರು ಮತ್ತು ಪ್ರಗತಿಪರ ರೈತರ ಜತೆ ಚರ್ಚಿಸಿವೆ. ಇವೆಲ್ಲವುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕಾನೂನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಒಮ್ಮೆ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ತೆಗೆದುನೋಡಿ. ಎಲ್ಲರೂ ಇದೇ ಕಾನೂನಿನ ಜಾರಿಯ ಕುರಿತೇ ಮಾತನಾಡಿದ್ದಾರೆ. ಆದರೆ ಈಗ ಅದೇ ಕಾನೂನನ್ನು ನಮ್ಮ ಸರ್ಕಾರ ಜಾರಿ ಮಾಡಿದರೆ ರೈತರ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರನ್ನ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ನಿಲ್ಲಿಸಬೇಕು. ಈ ದೇಶ ಆತ್ಮ ನಿರ್ಭರ ಭಾರತವಾಗಲು, ಅನ್ನದಾತರೂ ಸ್ವಾವಲಂಬಿಯಾಗುವುದು ಅತ್ಯಂತ ಅವಶ್ಯಕ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ರೈತರನ್ನು ಸಶಕ್ತಗೊಳಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಮತ್ತು ಮಾಡಲಿದೆ. ರೈತರಿಗೆ ನಾನು ಇಷ್ಟು ವಿವರಿಸಿದ ಮೇಲೂ ಏನಾದರೂ ಸಂಶಯಗಳಿದ್ದರೆ, ನಾವು ಚರ್ಚೆಗೆ ಸಿದ್ಧರಿದ್ದೇವೆ. ನಾನು ತಲೆ ಬಾಗಿ, ಕೈ ಮುಗಿದು ನಮ್ಮ ರೈತರನ್ನು ಕೋರುತ್ತೇನೆ. ನಿಮಗೆ ಏನೇ ಸಂಶಯವಿದ್ದರೂ ಬನ್ನಿ ಚರ್ಚಿಸಿ. ನಾವು ನಿಮ್ಮ ಆತಂಕವನ್ನು ದೂರ ಮಾಡಲು ಸದಾ ಸಿದ್ಧರಿದ್ದೇವೆ ಅಂತಾ ಸಹ ಅವರು ಕೋರಿದರು.
ತಾವು ಜಾರಿಗೆ ತಂದಿರುವ ನೂತನ ಕೃಷಿ ನೀತಿಯಲ್ಲಿ ಎಪಿಎಂಸಿ ಬಂದ್ ಮಾಡುವುದಾಗಲೀ, ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವ ಪ್ರಸ್ತಾವನೆಯೇ ಇಲ್ಲ. ಅಷ್ಟೇ ಅಲ್ಲ ಇವುಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ನಾವು ಬಂದ್ ಮಾಡುವುದೇ ಆಗಿದ್ದರೆ ಈ ಕಾನೂನು ಬಂದು ಕಳೆದ 6 ತಿಂಗಳಲ್ಲಿ ಎಪಿಎಂಸಿ ಮೂಲಕ ಖರೀದಿ ಮಾಡ್ತಿರಲಿಲ್ಲ. ಅಷ್ಟೇ ಅಲ್ಲ, ಕಳೆದ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಎಂಎಸ್ಪಿ ನೀಡುತ್ತಿರಲಿಲ್ಲ. ಅಷ್ಟೇ ಏಕೆ, ಎಂಎಸ್ಪಿ ಬಂದ್ ಮಾಡುವ ಉದ್ದೇಶ ನಮಗೆ ಇದ್ದಿದ್ದರೆ ನಾವು ಬರುವುದಕ್ಕಿಂತ 8 ವರ್ಷ ಮೊದಲೇ ನೀಡಲಾಗಿದ್ದ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತಲೇ ಇರಲಿಲ್ಲ ಎಂದು ಮೋದಿ ರೈತರಿಗೆ ಮಸೂದೆಯ ಬಗ್ಗೆ ವಿವರಿಸಿದರು.