ಹೊಸ ದಿಗಂತ ವರದಿ, ಕಾಸರಗೋಡು:
ಮೊದಲ ಹಂತದಲ್ಲಿ ವಿತರಿಸುವ ನಿಟ್ಟಿನಲ್ಲಿ ಕೇರಳಕ್ಕೆ ಕೋವಿಡ್ ವ್ಯಾಕ್ಸಿನ್ (ಚುಚ್ಚುಮದ್ದು) ಬುಧವಾರ ತಲುಪಿದೆ. ಅದರಂತೆ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಿಂದ ವ್ಯಾಕ್ಸಿನ್ ಶೀತಲೀಕರಣ ವ್ಯವಸ್ಥೆಯಲ್ಲಿರುವ ಪ್ರತ್ಯೇಕ ವಾಹನದಲ್ಲಿ ಕೊಚ್ಚಿ ರೀಜನಲ್ ಸ್ಟೋರ್ನಲ್ಲಿ ವ್ಯಾಕ್ಸಿನ್ ಸಂಗ್ರಹಿಸಿಡಲಾಯಿತು. ಮಲಬಾರ್ ವಲಯಕ್ಕೂ ಇಲ್ಲಿಂದಲೇ ಲಸಿಕೆಯನ್ನು ವಿತರಿಸಲಾಗುವುದು.
4,35,500 ಡೋಸ್ ಚುಚ್ಚುಮದ್ದನ್ನು ಕೇರಳಕ್ಕೆ ಮಂಜೂರು ಮಾಡಲಾಗಿದೆ. ಇದರಲ್ಲಿ 1100 ಡೋಸ್ ಲಸಿಕೆಯನ್ನು ಮಾಹಿ ಮೂಲಕ ವಿತರಿಸಲು ನಿರ್ಧರಿಸಲಾಗಿದೆ. ತಿರುವನಂತಪುರಕ್ಕೆ 1,34,000, ಎರ್ನಾಕುಳಂಗೆ 1,80,000, ಕಲ್ಲಿಕೋಟೆಗೆ 1,19,500 ಡೋಸ್ ಚುಚ್ಚುಮದ್ದು ತಲುಪಿಸುವ ಗುರಿ ಹೊಂದಲಾಗಿದೆ. ಇದೇ ವೇಳೆ ಶನಿವಾರ ಆರಂಭಗೊಳ್ಳುವ ಕೋವಿಡ್ ವ್ಯಾಕ್ಸಿನೇಶನ್ಗಿರುವ ಔಷಧಿಯನ್ನು ಶುಕ್ರವಾರದೊಳಗೆ ದೇಶದ ಎಲ್ಲಾ ಭಾಗಗಳಿಗೂ ತಲುಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು , ಅದರಂತೆ ಕೇರಳಕ್ಕೆ ಚುಚ್ಚುಮದ್ದು ಪೂರೈಕೆಯಾಗಿದೆ.