ಹೊಸ ದಿಗಂತ ವರದಿ, ಮಂಗಳೂರು:
ಭಾರತೀಯ ಜನತಾ ಪಾರ್ಟಿ ಮತ್ತು ಕಾರ್ಯಕರ್ತರ ವಿಶ್ವಾಸ ಮತ್ತು ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ನೋಡಿ ಕೊಳ್ಳುವುದರೊಂದಿಗೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷ ನನ್ನನ್ನು ಈ ಹಂತಕ್ಕೆ ಬೆಳೆಸಿದೆ. ಜನತೆಯ ನಂಬಿಕೆಗೆ ಧಕ್ಕೆಯಾಗದಂತೆ ಸಚಿವನಾಗಿ ಕೊಟ್ಟ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತೇನೆ. ಹಿರಿಯ ನಿರೀಕ್ಷೆಯನ್ನು ಹುಸಿ
ಮಾಡುವುದಿಲ್ಲ. ಪಕ್ಷದ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿಯೇ ಮುನ್ನಡೆಯುತ್ತೇನೆ. ಅಭಿವೃದ್ಧಿ ಕೆಲಸಗಳಿಗೆ ವಿಶೇಷ ಒತ್ತು ನೀಡುತ್ತೇನೆ ಎಂದು ಸಚಿವ ಅಂಗಾರ ಹೇಳಿದರು.
ನಾನು ಪಕ್ಷ ನಿಷ್ಠನಾಗಿದ್ದು, ಎಂದೂ ಅಧಿಕಾರಕ್ಕಾಗಿ ಹಾತೊರೆದಿಲ್ಲ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕೆಲಸ ನಿರ್ವಹಿಸುತ್ತೇನೆ. ನನಗೆ ಸಂದ ಅಭಿನಂದನೆ ಪಕ್ಷ ಸಂಘಟನೆಗೆ ಸಿಕ್ಕ ಗೌರವವಾಗಿದೆ ಎಂದು ಎಸ್.ಅಂಗಾರ ನುಡಿದರು.