ಧಾರವಾಡ: ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಹೀಗಾಗಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆರ ಸಂಘದಿಂದ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಎಚ್ಚರಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾತಿಗೆ ತಪ್ಪಿದ ಸರ್ಕಾರಕ್ಕೆ ಬುದ್ಧಿ ಕಲಿಸಲು ಪುನಃ ಸೆ.22 ರಿಂದ ರಾಜ್ಯದ 42 ಸಾವಿರ ಆಶಾಗಳು ಎಲ್ಲ ಜಿಲ್ಲೆಗಳಲ್ಲಿ ಸಾಂಕೇತಿಕ ಹೋರಾಟ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈಗಾಗಲೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದಾಗ ಸರ್ಕಾರ ಈಡೇರಿಸುವ ಭರವಸೆ ನೀಡಿತ್ತು. ಹೀಗಾಗಿ ಪ್ರತಿಭಟನೆ ಹಿಂಪಡೆಯಿತು. ಕೊರೋನಾ ವಾರಿಯರ್ಸ್ ಗಳಾದ ಆಶಾಗಳನ್ನು ಸರ್ಕಾರ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.
ಸೆ.21 ರಿಂದ ಆರಂಭಿಸುವ ಅಧಿವೇಶನದಲ್ಲಿ ಆಶಾಗಳಿಗೆ ರೂ.12 ಸಾವಿರ ವೇತನ ಹೆಚ್ಚಳ, ಎರಡು ವರ್ಷದಿಂದ ಬಾಕಿ ಇರುವ ಪ್ರೋತ್ಸಾಹ ಧನ, ಕೋವಿಡ್ ನಲ್ಲಿ ಘೋಷಿಸಿದ ರೂ.3000 ಸಾವಿರ ಪ್ರೋತ್ಸಾಹ ಹಣ ತಕ್ಷಣವೇ ನೀಡಬೇಕೆಂದು ಆಗ್ರಹಿಸಿದರು.
ಅಧಿವೇಶನದಲ್ಲಿ ಬೇಡಿಕೆ ಈಡೇರಿಸದಿದ್ದರೇ, ಬರುವ ದಿನಗಳಲ್ಲಿ ಆಶಾಗಳಿಂದ ಸರ್ಕಾರ ದೊಡ್ಡ ಪ್ರತಿರೋಧ ಎದುರಿಸಬೇಕಾಗಲಿದೆ. ಅಗತ್ಯ ಬಿದ್ದರೆ ವಿಧಾನಸೌಧಕ್ಕೂ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಕಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಮಂಜುಳಾ ಕೋಸುಂದರ ಇದ್ದರು.