Saturday, August 13, 2022

Latest Posts

ಕೊಡಗನ್ನು ವಿಶೇಷವಾಗಿ ಪರಿಗಣಿಸಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ: ವೀಣಾ ಅಚ್ಚಯ್ಯ

ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ಜಿಲ್ಲೆಯ ಜನ ಇದೀಗ ಕೊರೋನಾ ಲಾಕ್‌ಡೌನ್‌ನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊಡಗನ್ನು ವಿಶೇಷವಾಗಿ ಪರಿಗಣಿಸಿ ವಿಶೇಷ ಪ್ಯಾಕೇಜ್ ಮೂಲಕ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2018 ಮತ್ತು 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೊಡಗಿನ ಜನ ಸಾಮಾನ್ಯರು, ರೈತರು ಹಾಗೂ ಬೆಳೆಗಾರರು ಅನೇಕ ರೀತಿಯಲ್ಲಿ ಕಷ್ಟಕ್ಕೆ ಸಿಲುಕಿಕೊಂಡು ಇಲ್ಲಿಯವರೆಗೆ ಚೇತರಿಸಿಕೊಂಡಿಲ್ಲ. ಇದರ ನಡುವೆಯೇ ಕೊರೋನಾ ಲಾಕ್‌ಡೌನ್ ಜಾರಿಯಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯೇ ಸಂಪೂರ್ಣವಾಗಿ ಬುಡ ಮೇಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಮಳೆಗಾಲ ಜಿಲ್ಲೆಯನ್ನು ಪ್ರವೇಶಿಸಲಿದ್ದು, ರೈತರು, ಬೆಳೆಗಾರರು ಸೇರಿದಂತೆ ಎಲ್ಲಾ ವರ್ಗದ ಜನ ಆತಂಕದಲ್ಲಿದ್ದಾರೆ. ಆದ್ದರಿಂದ ಕೊಡಗಿನ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿ ಹಾನಿ ಮತ್ತು ಕೊರೋನಾ ಲಾಕ್‌ಡೌನ್ ಸಂಕಷ್ಟದ ನಡುವೆಯೇ ರೈತರು ಹಾಗೂ ಬೆಳೆಗಾರರಿಗೆ ಸಂಬಂಧಿಸಿದ ವಿಚಾರದಲ್ಲಿ ಹೊಸ ಹೊಸ ಕಾನೂನು, ಕಾಯ್ದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಖಂಡನೀಯ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗಲೇ ಸಹಕಾರ ಸಂಘಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಅವರು ದೂರಿದರು.

ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಿದ್ದ ಸರ್ಕಾರ ಇದೀಗ ವಸೂಲಾತಿ ಸಂದರ್ಭ ಶೇ.7 ರಷ್ಟು ಬಡ್ಡಿ ಪಾವತಿಸಬೇಕೆಂದು ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದ ಅವರು, ಇದು ರೈತರು ಹಾಗೂ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರವಾಗಿದೆ. ಶೂನ್ಯ ಬಡ್ಡಿದರದ ಹಳೆಯ ಸಾಲಕ್ಕೆ ಶೇ.7 ರಷ್ಟು ಬಡ್ಡಿ ವಸೂಲಿ ಮಾಡುವ ಕ್ರಮವನ್ನು ಕೈಬಿಟ್ಟು ಹೊಸ ಸಾಲಕ್ಕೆ ಹೊಸ ನಿಯಮವನ್ನು ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ಪಡಿತರ ಚೀಟಿ ಇರುವವರಿಗೆ ಮಾತ್ರ ಸಾಲ ನೀಡಲಾಗುವುದೆಂದು ಸರ್ಕಾರ ಹೇಳಿದೆ. ಆದರೆ ಒಂದೇ ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರುಗಳ ಹೆಸರಿದ್ದು, ಪ್ರತ್ಯೇಕವಾಗಿ ತಮ್ಮ ತಮ್ಮ ಹೆಸರಿಗೆ ಸೇರಿದ ಭೂಮಿಯಲ್ಲಿ ಕೃಷಿ ಮಾಡುವ ಅನೇಕ ಕುಟುಂಬಗಳು ಕೊಡಗು ಜಿಲ್ಲೆಯಲ್ಲಿವೆ. ಸರ್ಕಾರ ಪಡಿತರ ಚೀಟಿ ಇರುವವರಿಗೆ ಮಾತ್ರ ಸಾಲ ನೀಡಲು ಮುಂದಾದರೆ ಉಳಿದ ರೈತರಿಗೆ ಅನ್ಯಾಯವಾಗಲಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ರುಪೇ ಕಾರ್ಡ್ ಮೂಲಕ ಸಾಲ ನೀಡಲಾಗುವುದೆಂದು ಘೋಷಿಸುವ ಮೂಲಕ ರೈತರು ಹಾಗೂ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿದೆ. ಅಲ್ಲದೇ ಡಿಸಿಸಿ ಬ್ಯಾಂಕ್ ಹೊರತುಪಡಿಸಿದಂತೆ ಬೇರೆ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ.

ಕೇವಲ 3 ಲಕ್ಷ ರೂ. ಸಾಲಕ್ಕಾಗಿ ರೈತರು ಡಿಸಿಸಿ ಬ್ಯಾಂಕ್‌ಗೆ 100 ದಿನ ಅಲೆಯಬೇಕೇ ಎಂದು ಅವರು ಪ್ರಶ್ನಿಸಿದರು.
ಕೊರೋನಾ ಲಾಕ್‌ಡೌನ್‌ನ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲಾಗಿದೆ. ಈ ಕಾಯ್ದೆ ಜಾರಿಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಹೊರತು ಬೇರೆ ಯಾವುದೇ ಲಾಭವಿಲ್ಲ. ಕಾಯ್ದೆ ಜಾರಿಗೆ ಮೊದಲು ಸರ್ಕಾರ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿ ಚರ್ಚೆ ಮಾಡಬೇಕಾಗಿತ್ತು. ತರಾತುರಿಯಲ್ಲಿ ಕಾಯ್ದೆಯನ್ನು ಜಾರಿ ಮಾಡಿರುವುದನ್ನು ಗಮನಿಸಿದರೆ ಇದರಲ್ಲಿ ರೈತರಿಗೆ ಅನಾನುಕೂಲವೇ ಹೆಚ್ಚಾಗುವುದು ಸ್ಪಷ್ಟವಾಗುತ್ತಿದೆ. ಈ ಕಾಯ್ದೆಯ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಒಗ್ಗಟ್ಟಿನ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ನವೀನ್, ಧರ್ಮಜ ಉತ್ತಪ್ಪ, ಹಾಗೂ ಜಿಲ್ಲಾ ಸದಸ್ಯ ಎ.ಜೆ.ಬಾಬು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss