ಕೊಡಗು: ಕೊಡಗು ಜಿಲ್ಲೆಗೆ ಕುಶಾಲನಗರ ಹಾಗೂ ಸಂಪಾಜೆ ಮೂಲಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ನೆಲೆಸಿರುವವರ ಆಗಮನದ ಜೊತೆಗೆ ವಿದೇಶಗಳಲ್ಲಿ ವಾಸವಿರುವವರೂ ತಾಯ್ನಾಡಿಗೆ ವಾಪಾಸಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರಕಾರ ಈಗಾಗಲೇ ಕ್ರಮಕೈಗೊಂಡಿದ್ದು, ಅದರಂತೆ ವಿಮಾನಗಳ ಮೂಲಕ ಬೆಂಗಳೂರು, ಮಂಗಳೂರು ಹಾಗೂ ಕೇರಳದ ವಿಮಾನ ನಿಲ್ದಾಣಗಳಿಗೆ ಕೊಡಗಿನ ನಿವಾಸಿಗಳು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕುಶಾಲನಗರ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಖುದ್ದು ತೆರಳಿ ಪರಿಶೀಲಿಸಿದ್ದಾರೆ. ಚೆಕ್ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ, ಕಂದಾಯ, ಆಶಾ ಕಾರ್ಯಕರ್ತರು ಮತ್ತು ಪೊಲೀಸರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.
ಕೊಪ್ಪ ಹಾಗೂ ಕುಶಾಲನಗರದ ಭೂ ಮಾಲಕರು ಕೃಷಿ ಇಲಾಖಾ ಉಪನಿರ್ದೇಶಕರಿಂದ ಪಾಸ್ ಪಡೆದು ನಿತ್ಯ ಸಂಚರಿಸಲು ಅವಕಾಶವಿದೆ. ಅಗತ್ಯ ದಾಖಲೆಗಳೊಂದಿಗೆ ವ್ಯಾಪಾರ ವಹಿವಾಟುದಾರರು ಕುಶಾಲನಗರ ಡಿವೈಎಸ್ಪಿಯಿಂದ ಪಾಸ್ ಪಡೆಯಲು ಹಾಗೂ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಮತ್ತು ಕೊಪ್ಪದ ವರ್ತಕರು ಕುಶಾಲನಗರಕ್ಕೆ ಬರಬೇಕಾದರೆ ಹುಣಸೂರು ಡಿವೈಎಸ್ಪಿಯಿಂದ ಪಾಸ್ ಪಡೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ.
ಅಲ್ಲದೆ ವಿದೇಶಗಳಿಂದಲೂ ಪ್ರಯಾಣಿಕರು ಬರುವ ಸಾಧ್ಯತೆಯಿರುವದರಿಂದ ಅಂತರ ಜಿಲ್ಲಾ, ಅಂತರರಾಜ್ಯ ಪ್ರಯಾಣಿಕರ ತಪಾಸಣೆಯಂತೆ ವಿದೇಶಿಯರನ್ನೂ ತಪಾಸಣೆಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಈ ನಡುವೆ ಗುರುವಾರ ಮೂರ್ನಾಡುವಿನಿಂದ ಮಕ್ಕಳು ಸೇರಿದಂತೆ ೧೯ ಮಂದಿ ಕೂಲಿ ಕಾರ್ಮಿಕರು ಪಾದಚಾರಿಗಳಾಗಿಯೇ ಕೊಪ್ಪ ಗೇಟ್ ಬಳಿ ತಲುಪಿ ಸೇಲಂಗೆ ತೆರಳುವ ಪ್ರಯತ್ನ ನಡೆಸಿದ್ದು, ಅವರನ್ನು ಮರಳಿ ಮೂರ್ನಾಡುವಿಗೆ ಕಳುಹಿಸಿಕೊಡಲಾಗಿದೆ.