Thursday, August 11, 2022

Latest Posts

ಕೊಡಗಿನಲ್ಲಿ ಆಶ್ಲೇಷಾ ಮಳೆಯ ರುದ್ರ ನರ್ತನ: ಭಾಗಮಂಡಲ ಭಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ ಕಾವೇರಿ

ಮಡಿಕೇರಿ: ಕೊಡಗಿನಲ್ಲಿ ಆಶ್ಲೇಷಾ ಮಳೆಯ ರುದ್ರ ನರ್ತನ ಮುಂದುವರಿದಿದ್ದು, ಬಹುತೇಕ ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಕಾವೇರಿ ನದಿ ನೀರು ನುಗ್ಗಿದ್ದು, ಮತ್ತೊಂದೆಡೆ ಮಡಿಕೇರಿ-ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯ ತಾವರೆಕೆರೆ ಬಳಿ ಕಾವೇರಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತವಾಗಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ವಾಹನಗಳು ಗುಡ್ಡೆಹೊಸೂರು-ಹಾರಂಗಿ ಮಾರ್ಗವಾಗಿ ಸಂಚರಿಸುತ್ತಿವೆ.

ಕುಶಾಲನಗರದ ಕುವೆಂಪು, ಸಾಯಿ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೊಡಗಿನಲ್ಲಿ ಅಪಾಯದಂಚಿನಲ್ಲಿರುವ ಪ್ರದೇಶಗಳಿಂದ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಭಾಗಮಂಡಲ-ಮಡಿಕೇರಿ ಸಂಪರ್ಕ ಕಡಿತ: ಶುಕ್ರವಾರ ಬೆಳಗ್ಗೆ ಮಡಿಕೇರಿ-ಭಾಗಮಂಡಲ ರಸ್ತೆಯ ಚೆಟ್ಟಿಮಾನಿ ಬಳಿಯ ಚೆದುಕಾರು ಸೇತುವೆ ಮುಳುಗಡೆಯಾಗಿದ್ದು, ಪರಿಣಾಮವಾಗಿ ಮಡಿಕೇರಿ-ಭಾಗಮಂಡಲ ನಡುವಿನ ಸಂಪರ್ಕ ಕಡಿತವಾಗಿದೆ.
ಜಿಲ್ಲಾಡಳಿತ ಭವನಕ್ಕೂ ಅಪಾಯ: ಮಡಿಕೇರಿಯ ನಗರದಲ್ಲಿರುವ ಜಿಲ್ಲಾಡಳಿತ ಭವನದ ಮುಂಭಾಗದಲ್ಲೂ ಶುಕ್ರವಾರ ಮಂಗಳೂರು ರಸ್ತೆಗೆ ಬರೆ ಕುಸಿಯಲಾರಂಭಿಸಿದ್ದು, ಮಳೆಯ ತೀವ್ರತೆ ಮುಂದುವರಿದರೆ ಜಿಲ್ಲಾಡಳಿತ ಭವನಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ.

ಸಚಿವರ ಭೇಟಿ: ಈ ನಡುವೆ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಗುರುವಾರ ಸಂಜೆಯೇ ಜಿಲ್ಲೆಗೆ ಆಗಮಿಸಿ ಕುಶಾನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಶುಕ್ರವಾರ ಅವರು ತಲಕಾವೇರಿಯಲ್ಲಿ ಭೂಕುಸಿತ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಎನ್‍ಡಿಆರ್‍ಎಫ್‍ನ ರಕ್ಷಣಾ ಕಾರ್ಯವನ್ನು ಪರಿಶೀಲಿಸಲಿದ್ದಾರೆ. ವೀರಾಜಪೇಟೆಯ ಅಯ್ಯಪ್ಪ ಬೆಟ್ಟಕ್ಕೂ ತೆರಳಿ ಅಲ್ಲಿ ಅಪಾಯದಂಚಿನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss