Sunday, June 26, 2022

Latest Posts

ಕೊಡಗಿನಲ್ಲಿ ಕೊರೋನಾ ಕಂಡು ಬಂದರೆ ಹೋಂಸ್ಟೇಗಳನ್ನು ಹೊಣೆ ಮಾಡಿ: ಜಿಲ್ಲಾಡಳಿತಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಒತ್ತಾಯ

ಮಡಿಕೇರಿ: ಡಿಸೆಂಬರ್ ಅಂತ್ಯದವರೆಗೆ ಕೊಡಗಿನಲ್ಲಿ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದು ಎಂಬ ತನ್ನ ನಿಲುವನ್ನು ಪುನರುಚ್ಚರಿಸಿರುವ ಮಡಿಕೇರಿ ರಕ್ಷಣಾ ವೇದಿಕೆ, ಒಂದು ವೇಳೆ ಹೋಂಸ್ಟೇಗಳಲ್ಲಿ ಕೊರೋನಾ ಸೋಂಕಿತ ಪ್ರವಾಸಿಗರು ಕಂಡು ಬಂದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳು ಮತ್ತು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತ ಹೋಂಸ್ಟೇ ಅಸೋಸಿಯೇಷನ್‍ನಿಂದಲೇ ವಸೂಲಿ ಮಾಡಬೇಕೆಂದು ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಡಿಸೆಂಬರ್ ಅಂತ್ಯದವರೆಗೆ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ವೇದಿಕೆ ಒತ್ತಾಯಿಸಿತ್ತು. ಆದರೆ ಇದನ್ನೇ ನೆಪ ಮಾಡಿಕೊಂಡು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್‍ನ ಪ್ರಮುಖರು ವೇದಿಕೆ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಅಸೋಸಿಯೇಷನ್‍ನ ಪದಾಧಿಕಾರಿಗಳು ಆಡಿರುವ ಮಾತುಗಳು ಅವರ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಐದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿವೆ. ಆದರೆ ಕೇವಲ 200 ಮಂದಿ ಸದಸ್ಯರನ್ನು ಹೊಂದಿರುವ ಹೋಂಸ್ಟೇ ಅಸೋಸಿಯೇಷನ್ ಇಡೀ ಕೊಡಗಿನ ಧ್ವನಿಯಾಗಲು ಸಾಧ್ಯವಿಲ್ಲ್ಲ ಎನ್ನುವುದನ್ನು ಪ್ರಮುಖರು ಅರ್ಥಮಾಡಿಕೊಳ್ಳಬೇಕಿದೆ. ಅಸೋಸಿಯೇಷನ್ ಇದುವರೆಗೆ ಕೊಡಗಿನಲ್ಲಿ ಎಷ್ಟು ಅನಧಿಕೃತ ಹೋಂಸ್ಟೇಗಳನ್ನು ಗುರುತಿಸಿ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿದೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದರು.
ಹೋಂಸ್ಟೇಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆದರೆ ಅದಕ್ಕೆ ವೇದಿಕೆ ಹೊಣೆಯಾಗಬೇಕಾಗುತ್ತದೆ ಎಂದು ಅಸೋಸಿಯೇಷನ್ ನೀಡಿರುವ ಹೇಳಿಕೆಯ ಹಿಂದೆ ಹುನ್ನಾರ ಅಡಗಿದೆ ಎಂದು ಆರೋಪಿಸಿದ ಅವರು ಜಿಲ್ಲೆಯ ಗ್ರಾಮ, ಗ್ರಾಮಗಳ ಜನ ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬಾರದೆನ್ನುವ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಒಂದು ವೇಳೆ ಹೋಂಸ್ಟೇಗಳಲ್ಲಿ ಕೊರೋನಾ ಸೋಂಕಿತ ಪ್ರವಾಸಿಗರು ಕಂಡು ಬಂದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳು ಮತ್ತು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತ ಹೋಂಸ್ಟೇ ಅಸೋಸಿಯೇಷನ್ ಮೂಲಕವೇ ವಸೂಲಿ ಮಾಡಬೇಕೆಂದು ಜಿಲ್ಲಾಡಳಿತವನ್ನು ಪವನ್ ಪೆಮ್ಮಯ್ಯ ಒತ್ತಾಯಿಸಿದರು.
ಭಿಕ್ಷೆ ಬೇಡಿ ನೆರವು ನೀಡುತ್ತೇವೆ: ಹೋಂಸ್ಟೇ ನಡೆಸಲು ಸಾಧ್ಯವಾಗದೆ ಜೀವನ ನಡೆಸಲು ಅಸೋಸಿಯೇಷನ್‍ನ ಪ್ರಮುಖರಿಗೆ ಸಂಕಷ್ಟ ಎದುರಾಗಿದ್ದಲ್ಲಿ ಜಿಲ್ಲೆಯ ಜನರ ಬಳಿ ಭಿಕ್ಷೆ ಬೇಡಿ ನಷ್ಟ ಭರ್ತಿ ಮಾಡಿಕೊಡಲು ರಕ್ಷಣಾ ವೇದಿಕೆ ಸಿದ್ಧವಿದೆ ಎಂದು ಘೋಷಿಸಿದ ಅವರು, ವೇದಿಕೆ ಹೋಂಸ್ಟೇ, ರೆಸಾರ್ಟ್ ಅಥವಾ ಪ್ರವಾಸೋದ್ಯಮದ ವಿರೋಧಿಯಲ್ಲ. ಆದರೆ ಜಿಲ್ಲೆಯಲ್ಲಿ ಹೋಂಸ್ಟೇ ಹೆಸರಿನಲ್ಲಿ ನಡೆಯುತ್ತಿರುವ ‘ಟೂರಿಸಂ ಮಾಫಿಯಾ’ದ ವಿರೋಧಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಬೀಗ ಜಡಿಯಲು ಸಿದ್ಧ: ಜಿಲ್ಲೆಯನ್ನು ಕ್ಯಾನ್ಸರ್‍ನಂತೆ ಕಾಡುತ್ತಿರುವ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಪ್ರತಿ ಬಾರಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆಯೇ ಹೊರತು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ ಅವರು, ವೇದಿಕೆಗೆ ಅನುಮತಿ ನೀಡಿದರೆ ಜಿಲ್ಲಾಡಳಿತದ ಪರವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಅನಧಿಕೃತ ಹೋಂಸ್ಟೇಗಳನ್ನು ಗುರುತಿಸಿ ಬೀಗ ಜಡಿಯಲು ಸಿದ್ಧ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಮಿಷನ್ ದಂಧೆಯ ಟೂರಿಸಂ ಮಾಫಿಯಾ ನಡೆಯುತ್ತಿದೆ. ಕಳಪೆ ಗುಣಮಟ್ಟದ ರಾಸಾಯನಿಕ ಮಿಶ್ರಿತ ಜೇನು ಮಾರಾಟವಾಗುತ್ತಿದ್ದು, ಇದನ್ನು ಕೊಡಗಿನ ಜೇನು ಎಂದು ಪ್ರತಿಬಿಂಬಿಸಲಾಗುತ್ತಿದೆ. ಕೇವಲ 60 ರೂ.ಗಳಿಗೆ ಮೈಸೂರಿನಿಂದ ಸರಬರಾಜಾಗುವ ನಕಲಿ ಜೇನು 600 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ರೀತಿಯ ದಂಧೆಗಳಿಂದ ಕೊಡಗಿನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ. ಪ್ರವಾಸಿಗರನ್ನು ಕರೆತರುವ ಟ್ಯಾಕ್ಸಿ, ಟಿಟಿ ಮತ್ತಿತರ ವಾಹನಗಳ ಚಾಲಕರಿಗೆ ಬಿಲ್‍ನ ಶೇ.30ರಷ್ಟನ್ನು ಕಮಿಷನ್ ರೂಪದಲ್ಲಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಮಿಷನ್ ದಂಧೆಯ ಟೂರಿಸಂ ಮಾಫಿಯಾ ನಡೆಯುತ್ತಿದೆ. ಈ ರೀತಿಯ ದಂಧೆಗಳಿಂದ ಕೊಡಗಿನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಮಾಫಿಯಾಗಳ ಕಾರ್ಯಚಟುವಟಿಕೆಗಳನ್ನು ಮತ್ತು ಅನಧಿಕೃತ ಹೋಂಸ್ಟೇಗಳನ್ನು ಮಡಿಕೇರಿ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ಜೊತೆಯಲ್ಲಿ ಅಧಿಕೃತ ಹೋಂಸ್ಟೇಗಳನ್ನೇ ಅವಲಂಬಿಸಿ ಪ್ರಾಮಾಣಿಕವಾಗಿ ಬದುಕು ಸಾಗಿಸುತ್ತಿರುವವರ ಬಗ್ಗೆ ನಮಗೆ ಅನುಕಂಪವಿದೆ ಎಂದು ಸ್ಪಷ್ಟಪಡಿಸಿದ ಪವನ್ ಪೆಮ್ಮಯ್ಯ, ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಹೋಂಸ್ಟೇಗಳ ವಿರುದ್ಧ ನ್ಯಾಯಾಲದ ಮೆಟ್ಟಿಲೇರಲು ವೇದಿಕೆ ಸಿದ್ಧತೆ ನಡೆಸಿದೆ. ರಕ್ಷಣಾ ವೇದಿಕೆಗೆ ಕಾನೂನು ತಜ್ಞರ ತಂಡದ ಸಂಪೂರ್ಣ ಬೆಂಬಲವಿದ್ದು, ಯಾವುದೇ ರೀತಿಯ ಕಾನೂನು ಹೋರಾಟವನ್ನು ಎದುರಿಸಲು ಸಿದ್ಧವೆಂದು ತಿಳಿಸಿದರು.
ಕೊರೋನಾ ಸೋಂಕು ಹರಡುತ್ತದೆ ಎನ್ನುವ ಕಾರಣಕ್ಕಾಗಿ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾಗಿರುವ ಭಾಗಮಂಡಲದಲ್ಲಿ ಕೇಶ ಮುಂಡನ ಮತ್ತು ಪಿಂಡ ಪ್ರದಾನ ಕಾರ್ಯವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೆ ಹೊರ ರಾಜ್ಯ ಹಾಗೂ ಪರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಮುಕ್ತ ಅವಕಾಶವನ್ನು ನೀಡಿದೆ. ಧಾಮಿರ್ಕ ಕಾರ್ಯಗಳಿಂದ ಸೋಂಕು ಹರಡುವುದಾದರೆ, ಪ್ರವಾಸಿಗರಿಂದ ಸೋಂಕು ಹರಡುವುದಿಲ್ಲವೇ ಎಂದು ಪ್ರಶ್ನಿಸಿದ ಪವನ್ ಪೆಮ್ಮಯ್ಯ, ಭಾವನಾತ್ಮಕವಾದ ಧಾರ್ಮಿಕ ಆಚರಣೆಗೆ ಮಾತ್ರ ನಿರ್ಬಂಧ ಹೇರುವುದು ಸರಿಯಲ್ಲವೆಂದರು.
ತಕ್ಷಣ ಶಾಲೆ ಆರಂಭಿಸದಿರಿ: ರಾಜ್ಯದಲ್ಲಿ ಅನೇಕ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಹಣದ ಆಸೆಗೆ ತರಾತುರಿಯಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಲು ಮುಂದಾದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಡಿಕೇರಿ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಪವನ್ ಪೆಮ್ಮಯ್ಯ ಇದೇ ಸಂದರ್ಭ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಹರೀಶ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೆರ, ಖಜಾಂಚಿ ಉಮೇಶ್ ಗೌಡ ಹಾಗೂ ನಿರ್ದೇಶಕ ಪಾಪು ರವಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss