Friday, August 19, 2022

Latest Posts

ಕೊಡಗಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ: 30 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ಬೆಳೆಯುವ ಗುರಿ

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳ ಪ್ರಮುಖ ಬೆಳೆಗಳಾಗಿದ್ದು, ಜಿಲ್ಲೆಯಲ್ಲಿ ಈ ಬಾರಿ 30,400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 4 ಸಾವಿರ ಹೆಕ್ಟೇರ್‍ನಲ್ಲಿ ಜೋಳ ಬೆಳೆಯುವ ಗುರಿ ಹೊಂದಲಾಗಿದೆ.
ಮುಸುಕಿನ ಜೋಳವನ್ನು ಸೋಮವಾರಪೇಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇದರಲ್ಲಿ ಈಗಾಗಲೇ ಶೇ.10 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲ್ಲಿ ದಾಸ್ತಾನು ಮಾಡಿ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 2,600 ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಜೋಳ ಬಿತ್ತನೆ ಬೀಜ ಅಗತ್ಯವಿದ್ದು, ಈಗಾಗಲೇ 950 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಜು ಅವರು ಮಾಹಿತಿ ನೀಡಿದ್ದಾರೆ.
ಬೆಂಕಿ ರೋಗ ತಡೆಗೆ ಬೀಜೋಪಚಾರ 
ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತಿ ಒಂದು ಕೆ.ಜಿ.ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು, ಮೊಳಕೆ ಬಂದ ನಂತರ ಸಸಿ ಮಡಿಯಲ್ಲಿ ಬಿತ್ತನೆ ಮಾಡಬೇಕು. ಹೀಗೆ ಮಾಡುವುದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಯಾವ ತಳಿ ಸೂಕ್ತ 
ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655 ತಳಿ ಭತ್ತಗಳನ್ನು ಜೂನ್ 10 ರಿಂದ 20 ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ ಮೂರನೇ ಅಥವಾ 4ನೇ ವಾರದಲ್ಲಿ ಬಿತ್ತನೆ ಮಾಡಬೇಕು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ.
ರಸಗೊಬ್ಬರ ದಾಸ್ತಾನು
ಜಿಲ್ಲೆಯ ಸಹಕಾರ ಸಂಘ ಹಾಗೂ ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ಡಿ.ಎ.ಪಿ, ಎಂ.ಒ.ಪಿ, ಹಾಗೂ 17:17:17, 15:15:15, 10;26:26. ಹೀಗೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೆಶಕ ರಾಜು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!