Wednesday, August 17, 2022

Latest Posts

ಕೊಡಗಿನಲ್ಲಿ ಬಿಜೆಪಿ ರೈತ ಮೋರ್ಚಾದಿಂದ ನಾಯಕತ್ರಯರ ಸೇವಾ ಸಪ್ತಾಹ ಆಚರಣೆ

ನಾಪೋಕ್ಲು : ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ, ದೀನ ದಯಾಳ್ ಉಪಾಧ್ಯಾಯ ಹಾಗೂ ಗಾಂಧೀಜಿಯವರ ಹುಟ್ಟು ಹಬ್ಬದ ಸೇವಾ ಸಪ್ತಾಹವನ್ನು ಬಿ.ಜೆ.ಪಿ. ರೈತ ಮೋರ್ಚಾ ವತಿಯಿಂದ ಗೋವು ಪೂಜೆ, ಗಂಗಾ ಪೂಜೆ, ಮತ್ತು ಭೂಮಿ ಪೂಜೆ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.
ನಾಪೋಕ್ಲು ಗ್ರಾಮದ ಹಳೆ ತಾಲೋಕಿನ ಉದಯ ಶಂಕರ್ ಅವರ ಮನೆಯಲ್ಲಿ ಕಾರ್ಯಕ್ರಮವನ್ನು ಗೋವು, ಭೂಮಿ, ಮತ್ತು ಗಂಗೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಅವರು, ಜೀವ ಸಂಕುಲವನ್ನು ಉಳಿಸಬೇಕಾದರೆ ನಾವು ಭೂಮಿ, ಗಂಗೆ, ಮತ್ತು ಗೋವನ್ನು ಉಳಿಸಿಕೊಂಡರೆ ಮಾತ್ರ ಸಾಧ್ಯ ಎಂದರು.
ಈ ಮೂರು ವಿಷಯವನ್ನು ನಾವು ನಾಗರಿಕತೆಯಿಂದಲೇ ಕಾಪಾಡಿಕೊಂಡು ಬಂದಿರುವುದರಿಂದ ನಾವು ಇಂದು ಬದುಕಿ ಉಳಿದಿದ್ದೇವೆ, ನಾವು ಮುಖ್ಯವಾಗಿ ಭೂಮಿ ( ಮಣ್ಣು ) ಯನ್ನು ಕಾಪಾಡಬೇಕು. ಒಂದು ಹಿಡಿ ಮಣ್ಣು ಬೆಳೆಯಲು 500 ವರ್ಷಗಳು ಬೇಕು. ಆದುದರಿಂದ ಮಣ್ಣಿನ ಬಗ್ಗೆ ಜಾಗೃತಿ ಮುಖ್ಯ ಎಂದರು. ಹಾಗೆಯೇ ಪ್ರಪಂಚದಲ್ಲಿ ಶೇ.71ರಷ್ಟು ನೀರು ಇದ್ದರೂ, ಭೂಮಿಯ ಒಳಗೆ ಕೇವಲ ಶೇ.1.7ರಷ್ಟು ಮಾತ್ರ ನೀರಿದೆ. ಪ್ರಪಂಚದ ಶೇ.60ರಷ್ಟು ಮಂದಿ ಇಂದು ಕಲುಷಿತ ನೀರು ಕುಡಿಯುತ್ತಿದ್ದು, ವಾರ್ಷಿಕ 2 ಲಕ್ಷ ಜನ ಇದರಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.
ಇಂದು ಅಂತರ್ಜಲ ಕುಸಿದಿದ್ದು ಮುಂದೆ ಇದರಿಂದ ಭಾರಿ ಗಂಡಾಂತರ ಎದುರಿಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಅಂತರ್ಜಲ ಉಳಿಸಲು ಪ್ರಯತ್ನಿಸಬೇಕಿದೆ ಎಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ವಿವಿಧ ಕಾರ್ಯಕ್ರಮಗಳನ್ನು ಗ್ರಾಮಿಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. ಗೋವು ಕೂಡಾ ಮಾನವನ ಜೀವನದಲ್ಲಿ ಮುಖ್ಯವಾಗಿದ್ದು, ಇವು ನೀಡುವ ಹಾಲು, ಮೊಸರು, ತುಪ್ಪ, ಗೋಮೂತ್ರದಿಂದ ಇಂದು ಹಲವಾರು ರೋಗ ರುಜಿನಗಳು ಮಾಯವಾಗಿ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ. ಇಂದು ಅಮೇರಿಕಾದಂತಹ ದೇಶ ಗೋವಿನ ಸಗಣಿಯಿಂದ ಪೆಟ್ರೋಲ್ ತಯಾರಿಸಲು ಹೊರಟಿದೆ. ಮುಂದೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಈ ವಿಷಯದ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ತಿಳಿಹೇಳಬೇಕೆಂದು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಬಿ.ಜೆ.ಪಿ. ಮಾಜಿ ಪ್ರಧಾನ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಗೋವು ಪೂಜೆ, ಗಂಗಾ ಪೂಜೆ, ಮತ್ತು ಭೂಮಿ ಪೂಜೆಯಂತಹ ವಿಭಿನ್ನ ಕಾರ್ಯಕ್ರಮ ಇದುವರೆಗೆ ಯಾವುದೇ ಒಂದು ಪಕ್ಷದಿಂದ ಆಗಿಲ್ಲ. ಇದನ್ನು ಬಿ.ಜೆ.ಪಿ. ಪಕ್ಷ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧೀಜಿ, ದೀನ ದಯಾಳ್ ಉಪಾಧ್ಯಯ, ಇವರುಗಳ ಹುಟ್ಟು ಹಬ್ಬದ ಪ್ರಯುಕ್ತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು. ಅವರಿಗೆ ನೀಡಿದ ಗೌರವವಾಗಿದೆ ಎಂದರು.
ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿದರು.
ಈ ಸಂದರ್ಭ ತಮ್ಮ ಗದ್ದೆಯಲ್ಲಿ ನಿರಂತರವಾಗಿ ಕೃಷಿ ಮಾಡಿದ 9 ಜನ ಬೆಳೆಗಾರರನ್ನು ಮತ್ತು ಕೃಷಿ ಕಾರ್ಮಿಕರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ, ಜಿ. ಪಂ. ಸದಸ್ಯರಾದ ಪಾಡಿಯಮ್ಮಂಡ ಮುರಳೀಧರ್, ಕಲಾವತಿ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಕಾಂಗೀರ ಸತೀಶ್, ಕಾರ್ಯದರ್ಶಿ ಕೋಡಿ ಪ್ರಸನ್ನ, ತಾ,. ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ, ಸದಸ್ಯೆ ಉಮಾ ಪ್ರಭು, ಮೋಹನ್, ಆರ್.ಎಂ.ಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಅರೆಯಡ ಅಶೋಕ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!