ಮಡಿಕೇರಿ: ಕಳೆದ ಎರಡು ವರ್ಷಗಳÀ ಮಹಾಮಳೆಯಿಂದ ಮಿಂದೆದ್ದಿದ್ದ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಅದೇಕೋ ಮುಂಗಾರು ಮುನಿಸಿಕೊಂಡಂತೆ ಕಾಣುತ್ತಿದೆ. ಜುಲೈ ತಿಂಗಳ ಮಳೆ ಎಂದರೆ ಅದು ಮಳೆಯೂರು ಕೊಡಗಿಗೆ ಶೋಭೆ ತರುವಂತಿತ್ತು. ಆದರೆ ಈ ಬಾರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದ್ದು, ಸೋಮವಾರಪೇಟೆ ತಾಲೂಕಿನ ಬಹುತೇಕ ಕಡೆ ಮಳೆಯ ಕೊರತೆ ಕಂಡು ಬಂದಿದೆ.
ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳು ಮಳೆಯ ತಿಂಗಳುಗಳೆಂದೇ ಕರೆಯಲಾಗುತ್ತಿತ್ತು. ಜೂನ್ ತಿಂಗಳಿನಲ್ಲಿ ಕನಿಷ್ಟ 25 ದಿನ (1010 ಮಿ.ಮೀ.) ಹಾಗೂ ಜುಲೈ ತಿಂಗಳಿನಲ್ಲಿ 28 ದಿನ (1003 ಮಿ.ಮೀ) ಮಳೆಯಾಗಬೇಕು. ಆದರೆ ಈ ಬಾರಿ ಮಳೆಗಿಂತ ಬಿಸಿಲಿನ ದಿನಗಳೇ ಅಧಿಕವಾಗಿದೆ. ಒಂದು ತಿಂಗಳಲ್ಲಿ ಸುರಿಯಬೇಕಾದ ಮಳೆಯ ಅರ್ಧ ಭಾಗದಷ್ಟು ಮಳೆ ಜನವರಿಯಿಂದ ಇದುವರೆಗೆ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ ವರ್ಷಾರಂಭದಿಂದ ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಸರಾಸರಿ ಕೇವಲ 341.18 ಮಿ.ಮೀ.ಮಳೆಯಾಗಿದ್ದರೆ, ಜುಲೈ 10ರವರೆಗೆ 600.69 ಮಿ.ಮೀ. (ಕಳೆದ ವರ್ಷ ಇದೇ ಅವಧಿಯಲ್ಲಿ 600.46 ಮಿ.ಮೀ ಮಳೆಯಾಗಿತ್ತು.)ಮಳೆಯಾಗಿದೆ.
ವರದಿಯಲ್ಲಿ ಮಾತ್ರ ಮಳೆ: ಕೊಡಗು ಜಿಲ್ಲಾಡಳಿತ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಯಂತೆ ಪ್ರತಿನಿತ್ಯ ಧಾರಾಕಾರ ಮಳೆಯಾಗಲಿದೆ ಎಂದು ಪ್ರಕಟಿಸುತ್ತಲೇ ಬಂದಿದೆಯಾದರೂ ಒಂದೆರಡು ದಿನ ಉತ್ತಮ ಮಳೆಯಾಗಿ ಉಳಿದ ದಿನಗಳಲ್ಲಿ ಮಳೆಯೇ ಮಾಯವಾಗಿದೆ.
ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಬಿಸಿಲು ಕಾಣುವುದೇ ಅಪರೂಪ. ಆದರೆ ಈ ಬಾರಿ ಸೋಮವಾರಪೇಟೆಯ ವಿವಿಧೆಡೆ ಬಿಸಿಲಿನ ವಾತಾವರಣವೇ ಹೆಚ್ಚಾಗಿದೆ. ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಜಲಪಾತಗಳು ಕೂಡ ಬರಡಾದಂತೆ ಕಂಡು ಬಂದಿದ್ದು, ಮಡಿಕೇರಿ- ಚೆಟ್ಟಳ್ಳಿ ಮಾರ್ಗದ ಅಬ್ಯಾಲ ಜಲಪಾತ ಮಳೆಯಿಲ್ಲದೆ ಸೊರಗಿದೆ. ಮಳೆಗಾಲದಲ್ಲಿ ನಿತ್ಯ ಮೈದುಂಬಿ ಹರಿದು ಹಾಲ್ನೊರೆಯಂತೆ ಆಕರ್ಷಿಸುತ್ತಿದ್ದ ಈ ಜಲಪಾತ ಇಂದು ದಾರಿಹೋಕರನ್ನು ನಿರಾಶೆಗೊಳಿಸುತ್ತಿದೆ.
ಹಾರಂಗಿ ಜಲಾಶಯ ಅವಧಿಗೂ ಮುನ್ನ ಭರ್ತಿಯಾಗಲಿದೆ ಎಂದು ಹೇಳಲಾಗಿತ್ತಾದರೂ, ಮಳೆಯ ಕೊರತೆಯಿಂದ ಶೀಘ್ರ ಭರ್ತಿಯಾಗುವ ಸಾಧ್ಯತೆಗಳು ಕಡಿಮೆ ಇದೆ. ಸೋಮವಾರಪೇಟೆ ತಾಲೂಕಿನ ಬಹುತೇಕ ಕಡೆ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದ್ದು, ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕೃಷಿಕರು ಕೃಷಿಗೆ ಪೂರಕವಾದ ಮಳೆಯ ನಿರೀಕ್ಷೆಯಲ್ಲಿದ್ದರೆ ಪ್ರಕೃತಿ ಮಾತೆ ವಾಡಿಕೆ ಮಳೆಗಾಗಿ ಎದುರು ನೋಡುತಿದ್ದಾಳೆ.