ಮಡಿಕೇರಿ: ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕೇಂದ್ರವನ್ನು ಕೊಡಗು ಜಿಲ್ಲೆಯಲ್ಲೇ ತೆರೆಯುವಂತೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧವಾಗಿ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಕೊಡಗು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರುಗಳನ್ನು ಪಿಯುಸಿ ಮೌಲ್ಯಮಾಪನಕ್ಕಾಗಿ ಮೈಸೂರು ಮತ್ತು ಮಂಗಳೂರಿಗೆ ನೇಮಿಸುತ್ತಿರುವುದಾಗಿ ಹೇಳಲಾಗಿದೆ. ಆದರೆ ಈ ವರ್ಷ ಕೋವಿಡ್-19 ವೈರಸ್ನಿಂದಾಗಿ ಜಿಲ್ಲೆಯ ಪ್ರಾಧ್ಯಾಪಕರು ಬೇರೆಡೆಗೆ ಹೋಗಿ ಕಾರ್ಯನಿರ್ವಹಿಸಲು ಭಯಭೀತರಾಗಿದ್ದಾರೆ.
ಅಲ್ಲದೆ ಅಲ್ಲಿ ಮೌಲ್ಯಮಾಪನ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯೂ ಕಷ್ಟಕರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರವನ್ನು ಮಡಿಕೇರಿಯಲ್ಲೇ ತೆರದು ಇಲ್ಲಿನ ಪ್ರಾಧ್ಯಾಪಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗಮನಸೆಳೆದಿದ್ದಾರೆ.