ಹೊಸದಿಗಂತ ವರದಿ, ಮಡಿಕೇರಿ :
ಮಳೆಗಾಲ ಮುಗಿದಿದ್ದು, ಕೊಡಗು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಕಾಮಗಾರಿಗಳ ಪ್ರಗತಿ, ಕೋವಿಡ್-19 ನಿರ್ವಹಣೆ, ಮತ್ತಿತರ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಏಪ್ರಿಲ್, ಮೇವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಈಗಿನಿಂದಲೇ ಅಭಿವೃದ್ಧಿ ಕಾರ್ಯದತ್ತ ವಿಶೇಷ ಆದ್ಯತೆ ನೀಡಬೇಕು. ಹಾಗೆಯೇ ಸರ್ಕಾರದ ಹಲವು ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
2019ರಲ್ಲಿ ಸಂಭವಿಸಿದ ಮಳೆಹಾನಿ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿ ನಿರ್ವಹಣೆ ಸಂಬಂಧ ಬಿಲ್ಲನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚಿಸಿದ ಅವರು, ಪ್ರಕೃತಿ ವಿಕೋಪದಿಂದ ಅಂಗನವಾಡಿ, ಶಾಲಾ ಕಟ್ಟಡಗಳು, ಆಸ್ಪತ್ರೆ, ರಸ್ತೆ, ವಿದ್ಯುತ್ ಕಂಬ ಹೀಗೆ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇವುಗಳು ಮೂಲ ಸೌಲಭ್ಯಗಳಲ್ಲಿ ಅತಿ ಮುಖ್ಯವಾಗಿವೆ ಎಂದು ತಿಳಿಸಿದರು.
ಮಳೆಹಾನಿ ಕಾಮಗಾರಿ ಸಂಬಂಧಿಸಿದಂತೆ ಜಿ.ಪಂ.ಸಿಇಒ ಅವರು ಮಾಹಿತಿ ತರಿಸಿಕೊಳ್ಳಬೇಕು. ಈ ಬಗ್ಗೆ ಪರಿಶೀಲಿಸಬೇಕು ಎಂದು ಅನ್ಬುಕುಮಾರ್ ಸಲಹೆ ಮಾಡಿದರು.
ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಹಾನಿ ಸಂಬಂಧ ಎಂಜಿನಿಯರ್ ಅವರು ಅಂದಾಜು ಪಟ್ಟಿ ಸಲ್ಲಿಸಿ, ಜಿಲ್ಲಾಧಿಕಾರಿಯವರಿಂದ ಆಡಳಿತಾತ್ಮಕ ಅನುಮೋದನೆ ದೊರೆತಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಬಹುದು.ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅವರು ತಿಳಿಸಿದರು.
ಶಾಲಾ-ಕಾಲೇಜುಗಳು ಸರ್ಕಾರಿ ಕಚೇರಿಗಳು, ಜೊತೆಗೆ ಸರ್ಕಾರದ ಖಾಲಿ ಜಾಗದಲ್ಲಿ ಪಕ್ಷಿಗಳಿಗೆ ಅನುಕೂಲವಾಗುವ ಗಿಡಗಳನ್ನು ಅಭಿಯಾನ ಮಾದರಿಯಲ್ಲಿ ನೆಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು 2019 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ಈಗಾಗಲೇ ಪ್ರಥಮ ಹಂತದಲ್ಲಿ ಒಂದು ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಹಣ ಪಡೆದ ಶೇ.50ರಷ್ಟು ಮಂದಿ ಮನೆ ಕಾಮಗಾರಿ ಆರಂಭಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.
ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆಯಿಂದ 4 ಜನರು ಮೃತಪಟ್ಟಿದ್ದು, ಇಬ್ಬರು ಕಾಣೆಯಾಗಿದ್ದಾರೆ. 17 ಜಾನುವಾರುಗಳು ಮಳೆಯಿಂದ ಮೃತಪಟ್ಟಿವೆ. ಮನೆ ಸಂಬಂಧಿಸಿದಂತೆ 291 ಭಾಗಶ: ಹಾನಿ, 43 ತೀವ್ರ ಹಾನಿ, 12 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್ ಅವರು ಹೋಬಳಿವಾರು ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈಗಾಗಲೇ 97 ರಷ್ಟು ಬೆಳೆ ಸಮೀಕ್ಷೆಯಾಗಿದೆ. ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಗ್ರಾಮ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದ್ದು, ಈ ಕುರಿತು ರೈತರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ರೈತರು ಬೆಳೆ ಮಾಹಿತಿ, ವಿಸ್ತೀರ್ಣದ ಮಾಹಿತಿ ಕುರಿತು ಬೆಳೆ ದರ್ಶಕ್ ಮೊಬೈಲ್ ಆಪ್ ಮೂಲಕ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ 10 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಿದರು.
ಮಳೆಹಾನಿ ಕಾಮಗಾರಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಕೋವಿಡ್-19 ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸ್ವಚ್ಛ ಭಾರತ್ ಅಭಿಯಾನ ಯೋಜನೆ ಕುರಿತು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರರಾದ ಗೋವಿಂದ ರಾಜು(ಸೋಮವಾರಪೇಟೆ), ಮಹೇಶ್(ಮಡಿಕೇರಿ), ನಂದೀಶ್(ವೀರಾಜಪೇಟೆ), ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೊ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.