Thursday, June 30, 2022

Latest Posts

ಕೊಡಗಿನ ಅರಣ್ಯಾಧಿಕಾರಿಗಳು, ಅರಣ್ಯರಕ್ಷಕ ಸೇರಿ ಐವರಿಗೆ ಮುಖ್ಯಮಂತ್ರಿ ಪದಕ

ಹೊಸದಿಗಂತ ವರದಿ, ಕೊಡಗು:

ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಕೊಡಮಾಡುವ ಮುಖ್ಯಮಂತ್ರಿಗಳ ಪದಕಕ್ಕೆ ಕೊಡಗಿನ ನಾಲ್ವರು ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಓರ್ವ ಅರಣ್ಯ ರಕ್ಷಕ ಪಾತ್ರರಾಗಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಡೆದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಕೊಡಗಿನ ಉಪವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಕಳ್ಳಿರ ದೇವಯ್ಯ, ವೈ.ಕೆ.ಜಗದೀಶ್, ಚರಣ ಕುಮಾರ್ ಹಾಗೂ ಅರಣ್ಯ ರಕ್ಷಕ ಚೌಡಪ್ಪ ನಾಯ್ಕ ವಿ.ಜಿದ್ದಿಮನಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪದಕ ನೀಡಿ ಗೌರವಿಸಿದರು.

ಸರಕಾರವು 2017ರಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ತೋರಿದ ಅರಣ್ಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಪ್ರತೀವರ್ಷ ಮುಖ್ಯಮಂತ್ರಿ ಪದಕ ನೀಡಲು ತೀರ್ಮಾನಿಸಿತ್ತು. ಅದರಂತೆ ವೃತ್ತ ಮಟ್ಟದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನೂ ರಚಿಸಿತ್ತು. ಆದರೆ 2017 ಹಾಗೂ 2018ನೇ ಸಾಲಿನಲ್ಲಿ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಆಯ್ಕೆ ಮಾಡಿದ್ದರೂ, ಕಾರಣಾಂತರದಿಂದ ಮುಖ್ಯಮಂತ್ರಿ ಪದಕ ನೀಡಿರಲಿಲ್ಲ.

ಅದರಂತೆ 2017ರಿಂದ 2019ರವರೆಗೆ ಪ್ರತೀ ವರ್ಷ 25ರಂತೆ ಮೂರು ವರ್ಷದಲ್ಲಿ ಒಟ್ಟು 75 ಅರಣ್ಯ ಇಲಾಖೆಯ ಸಾಧಕರನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಹಲವು ಸಚಿವರುಗಳು, ಶಾಸಕರುಗಳು ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ಭಾಗಹಿಸಿದ್ದರು.

ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರದ ಮೇಲ್ವಿಚಾರಣಾ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹಲವೆಡೆ ಕಾಡಾನೆಗಳ ಸಂರಕ್ಷಣೆ, ಪುಂಡಾನೆಗಳ ಬಂಧಿಸುವ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ, ಆನೆಕಾಡಿನಲ್ಲಿ ಬೆಂಕಿ ಬಿದ್ದ ಸಂದರ್ಭ 2 ಚಿರತೆ ಮರಿಗಳನ್ನು ರಕ್ಷಿಸಿದ್ದಲ್ಲದೆ, ಚೆಟ್ಟಳ್ಳಿ ಸಮೀಪ ಉರುಳಿಗೆ ಬಿದ್ದ ಚಿರತೆಯನ್ನು ಬಿಡಿಸಲು ಹೋದ ಸಂದರ್ಭ ಚಿರತೆಯ ದಾಳಿಗೆ ಒಳಗಾಗಿ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.

ದಕ್ಷಿಣ ಕೊಡಗಿನ ಬೆಳ್ಳೂರಿನಲ್ಲಿ ಹಲವು ದಿನಗಳಿಂದ ತೊಂದರೆ ನೀಡುತ್ತಿದ್ದ ಹುಲಿಗಾಗಿ ನಿರಂತರ ಕಾರ್ಯಾಚರಣೆ ನಡೆಸಿ ಅರವಳಿಕೆಯ ಗುಂಡು ಹಾರಿಸಿ ಹುಲಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ರಂಜನ್, ಉತ್ತರಾಖಂಡ್‍ನಲ್ಲಿ ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಇಲಾಖೆ ಆದೇಶದಂತೆ ಭಾಗಿಯಾಗಿದ್ದರು.

ವೀರಾಜಪೇಟೆ ವಲಯದ ಕಳ್ಳಿರ ದೇವಯ್ಯ ಅವರು ಕೂಡ ಕಾಡಾನೆಗಳ ಕಾರ್ಯಾಚರಣೆಯಲ್ಲಿ ನುರಿತ ಸೇವೆಯನ್ನು ಸಲ್ಲಿಸಿದ ಪರಿಣಾಮ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss